ಗಡೀಪಾರಿನಿಂದ ನಟ ಚೇತನ್‌ಗೆ ಮಧ್ಯಂತರ ರಕ್ಷಣೆ ನೀಡಿದ ಹೈಕೋರ್ಟ್
ನ್ಯಾಯಾಂಗದ ವಿರುದ್ಧ ಯಾವುದೇ ಟ್ವೀಟ್ ಮಾಡದಂತೆ, ಹಿಂದಿನ ಟ್ವೀಟ್ ಅಳಿಸಲು ಸೂಚನೆ

ಬೆಂಗಳೂರು: ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಅವರಿಗೆ ಗಡೀಪಾರಿನಿಂದ ಕರ್ನಾಟಕ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ ಹಾಗೂ ಮುಂದಿನ ವಿಚಾರಣೆ ತನಕ ಅವರ ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ (ಒಸಿಐ) ಕಾರ್ಡ್ ಅನ್ನು ರದ್ದುಗೊಳಿಸದಂತೆ ಸರ್ಕಾರಕ್ಕೆ ಸೂಚಿಸಿದೆ.
ಒಸಿಐ ಕಾರ್ಡ್ ರದ್ದುಗೊಂಡಿದ್ದೇ ಆದಲ್ಲಿ ಚೇತನ್ ಕುಮಾರ್ ಅಕ್ರಮ ವಲಸಿಗರಾಗುತ್ತಾರೆ ಹಾಗೂ ಅವರನ್ನು ಗಡೀಪಾರು ಮಾಡಬೇಕಾಗುತ್ತದೆ.
ಗಡೀಪಾರಿನಿಂದ ಚೇತನ್ ಅವರಿಗೆ ಮಧ್ಯಂತರ ರಕ್ಷಣೆ ನೀಡಿದ ಜಸ್ಟಿಸ್ ಎಂ ನಾಗಪ್ರಸನ್ನ ಅದೇ ಸಮಯ ನಟ ನ್ಯಾಯಾಂಗದ ವಿರುದ್ಧ ಯಾವುದೇ ಟ್ವೀಟ್ ಮಾಡಬಾರದು ಮತ್ತು ಈ ಕುರಿತಾದ ತಮ್ಮ ಎಲ್ಲಾ ಟ್ವೀಟ್‌ಗಳನ್ನು ಅಳಿಸಬೇಕೆಂದು ಹೇಳಿದರು.
ಅವರು ದೇಶ ವಿರೋಧಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಅವರ ಒಸಿಐ ಕಾರ್ಡ್ ರದ್ದತಿ ಪ್ರಸ್ತಾಪಿಸಲಾಗಿತ್ತು. ಆದರೆ ಅವರಿಗೆ ಶೋಕಾಸ್ ನೋಟಿಸ್ ನೀಡಿರುವ ಹೊರತಾಗಿ ಅವರ ಅಭಿಪ್ರಾಯ ಆಲಿಸುವ ಅವಕಾಶ ನೀಡಲಾಗಿಲ್ಲ ಎಂಬುದನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ.
ಮುಂದಿನ ವಿಚಾರಣೆ ಜೂನ್ ತಿಂಗಳಿನಲ್ಲಿ ನಡೆಯಲಿದೆ. ಆದರೆ ಈ ಅವಧಿಯಲ್ಲಿ ಅವರಿಗೆ ವಿಧಿಸಲಾಗಿರುವ ಷರತ್ತನ್ನು ಅವರು ಉಲ್ಲಂಘಿಸಿದ್ದೇ ಆದಲ್ಲಿ ಅವರಿಗೆ ಗಡೀಪಾರಿನಿಂದ ನೀಡಲಾದ ರಕ್ಷಣೆಯು ಸ್ವಯಂಚಾಲಿತವಾಗಿ ಅನೂರ್ಜಿತಗೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿದೆ.







