ಬಿಹಾರದ ಜೈಲು ನಿಯಮ ಬದಲಿಸಿ ಮಾಜಿ ಐಎಎಸ್ ಅಧಿಕಾರಿ ಹತ್ಯೆಯ ಆರೋಪಿ ಮಾಜಿ ಸಂಸದನ ಬಿಡುಗಡೆಗೆ ಸೂಚನೆ; ಭಾರೀ ಆಕ್ರೋಶ

ಹೊಸದಿಲ್ಲಿ/ಪಾಟ್ನಾ: ಭಾರೀ ವಿರೋಧಕ್ಕೆ ಕಾರಣವಾದ ಬಿಹಾರ ಜೈಲು ಕೈಪಿಡಿಯನ್ನು ತಿದ್ದುಪಡಿ ಮಾಡಿದ ಕೆಲವೇ ದಿನಗಳ ನಂತರ ಬಿಹಾರ ಸರಕಾರವು 27 ಕೈದಿಗಳ ಬಿಡುಗಡೆಗೆ ಸೂಚನೆ ನೀಡಿದೆ. ಬಿಡುಗಡೆಯಾಗುವವರಲ್ಲಿ ಮಾಜಿ ಸಂಸದ ಆನಂದ್ ಮೋಹನ್ ಸಿಂಗ್ ಕೂಡ ಸೇರಿದ್ದು, ಈತ 1994 ರಲ್ಲಿ ಐಎಎಸ್ ಅಧಿಕಾರಿ ಜಿ. ಕೃಷ್ಣಯ್ಯ ಅವರ ಹತ್ಯೆಯಲ್ಲಿ ಅಪರಾಧಿಯಾಗಿದ್ದಾನೆ.
ಆನಂದ್ ಮೋಹನ್ ಸಿಂಗ್ ಪ್ರಚೋದನೆಗೆ ಒಳಗಾದ ಜನಸಮೂಹದಿಂದ ಅಂದಿನ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಜಿ. ಕೃಷ್ಣಯ್ಯ ಕೊಲೆಯಾಗಿದ್ದರು. ದರೋಡೆಕೋರ-ರಾಜಕಾರಣಿ ಸಿಂಗ್ ಗೆ ಬಿಹಾರದ ಕೆಳ ನ್ಯಾಯಾಲಯವು 2007 ರಲ್ಲಿ ಮರಣದಂಡನೆ ವಿಧಿಸಿತು. ಆದಾಗ್ಯೂ, ಪಾಟ್ನಾ ಹೈಕೋರ್ಟ್ ಇದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು. ಆ ಆದೇಶವನ್ನು ಸುಪ್ರೀಂ ಕೋರ್ಟ್ 2012ರಲ್ಲಿ ಎತ್ತಿ ಹಿಡಿದಿತ್ತು.
ನಿಯಮಗಳಲ್ಲಿನ ಬದಲಾವಣೆ ಹಾಗೂ ಆನಂದ್ ಮೋಹನ್ ಸಿಂಗ್ ನ ಬಿಡುಗಡೆಯು ಭಾರೀ ವಿವಾದವನ್ನು ಹುಟ್ಟುಹಾಕಿದೆ, ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ನಿಯಮಗಳ ಬದಲಾವಣೆಯನ್ನು "ದಲಿತ ವಿರೋಧಿ" ಎಂದು ಬಣ್ಣಿಸಿದೆ.
ಆಂಧ್ರಪ್ರದೇಶದ ಮೆಹಬೂಬ್‌ನಗರದ (ಈಗ ತೆಲಂಗಾಣದಲ್ಲಿರುವ) ಬಡ ದಲಿತ ಕುಟುಂಬಕ್ಕೆ ಸೇರಿದ ಅತ್ಯಂತ ಪ್ರಾಮಾಣಿಕ ಐಎಎಸ್ ಅಧಿಕಾರಿ ಜಿ. ಕೃಷ್ಣಯ್ಯ ಅವರ ಬರ್ಬರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆನಂದ್ ಮೋಹನ್ ನನ್ನು ಜೈಲು ನಿಯಮ ಬದಲಿಸಿ ಬಿಡುಗಡೆಗೆ ಸಿದ್ಧತೆ ನಡೆಸಿರುವ ನಿತೀಶ್ ಕುಮಾರ್ ಸರಕಾರದ ನಡೆ ಇಡೀ ದೇಶದಲ್ಲಿ ಋಣಾತ್ಮಕ ಹಾಗೂ ದಲಿತ ವಿರೋಧಿ ಕಾರಣಗಳಿಗಾಗಿ ಚರ್ಚಿಸಲಾಗುತ್ತಿದೆ" ಎಂದು ಮಾಯಾವತಿ ರವಿವಾರ ಟ್ವೀಟ್ ಮಾಡಿದ್ದಾರೆ.
ಆನಂದ್ ಮೋಹನ್ ಸಿಂಗ್ ಬಿಡುಗಡೆ ದಲಿತ ಸಮುದಾಯವನ್ನು ಕೆರಳಿಸುತ್ತದೆ ಎಂದು ಹೇಳಿದ ಮಾಯಾವತಿ, ನಿತೀಶ್ ಕುಮಾರ್ ಸರಕಾರ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಂಡರು.







