ಟೆಂಡರ್ ಆಹ್ವಾನಿಸದೆ ಕೆಲಸ ಮಾಡಿಸಿದ್ದ ಪ್ರಕರಣ | ಎಂಜಿನಿಯರ್ ವಿರುದ್ಧ ತನಿಖೆಗೆ ಅನುಮತಿ: ಹೈಕೋರ್ಟ್ ಗೆ ಮಾಹಿತಿ

ಬೆಂಗಳೂರು, ಎ.25: ಕೊರೋನ ಸೋಂಕು ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದಾಗ ಟೆಂಡರ್ ಆಹ್ವಾನಿಸದೇ 5.02 ಕೋಟಿ ರೂ.ಮೊತ್ತದ ಕಾರ್ಯಾದೇಶ ನೀಡಿ ಗುತ್ತಿಗೆದಾರರಿಂದ ಕೆಲಸ ಮಾಡಿಸಿದ್ದ ಕಾರ್ಯಕಾರಿ ಎಂಜಿನಿಯರ್ ವಿರುದ್ಧ ತನಿಖೆ ನಡೆಸಲು ಅನುಮತಿಸಲಾಗಿದೆ ಎಂದು ಹೈಕೋರ್ಟ್‍ಗೆ ರಾಜ್ಯ ಸರಕಾರವು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಮಂಡ್ಯ ಜಿಲ್ಲೆಯ ನಾಗೇಗೌಡ ಅವರ ಮನವಿಗೆ ರಾಜ್ಯ ಸರಕಾರವು ಸಮ್ಮತಿಸಿರುವುದರಿಂದ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠವು ಇತ್ಯರ್ಥಪಡಿಸಿದೆ.
ಸರಕಾರದ ಪರ ವಕೀಲರು, ಕಾರ್ಯಕಾರಿ ಎಂಜಿನಿಯರ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ರಾಜ್ಯ ಸರಕಾರವು ಅನುಮತಿಸಿರುವ ಆದೇಶವನ್ನು ಸಲ್ಲಿಸಿದ್ದಾರೆ ಎಂದು ನ್ಯಾಯಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರೂ ಅದು ನಿವೃತ್ತ ಕಾರ್ಯಕಾರಿ ಎಂಜಿನಿಯರ್ ಕೆ.ಶ್ರೀನಿವಾಸ್ ಅಥವಾ ತನಿಖಾ ಸಂಸ್ಥೆಯ ಮೇಲೆ ಪೂರ್ವಾಗ್ರಹ ಉಂಟು ಮಾಡಲಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ವಿರುದ್ಧ ಐಪಿಸಿ ಸೆಕ್ಷನ್‍ಗಳ ಅಡಿ ತನಿಖೆ ಮುಂದುವರಿಯಲಿದೆ.







