ಕೋಮುವಾದಿ ಬಿಜೆಪಿ ಸೋಲಿಸಿ, ಜಾತ್ಯತೀತ ಪಕ್ಷ ಬೆಂಬಲಿಸಲು ಕರೆ: ಉಡುಪಿ ಸಿಐಟಿಯುಯಿಂದ ಕಾರ್ಮಿಕರ ಪ್ರಣಾಳಿಕೆ ಬಿಡುಗಡೆ

ಉಡುಪಿ, ಎ.25: ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರದಲ್ಲಿರುವ ಕೋಮು ವಾದಿ ಬಿಜೆಪಿ ಸರಕಾರವನ್ನು ಸೋಲಿಸುವ ಮೂಲಕ ಬುದ್ದಿ ಕಲಿಸಬೇಕಾಗಿದೆ. ಮುಂದೆ ಅಧಿಕಾರಕ್ಕೆ ಬರುವ ಸರಕಾರಗಳಿಗೆ ಇದು ಎಚ್ಚರಿಕೆ ಗಂಟೆಯಾಗಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.
ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಉಡುಪಿ ಪ್ರತಿಕಾ ಭವನದಲ್ಲಿ ಇಂದು ನಡೆದ ಶಾಂತಿ ಸೌಹಾರ್ದ ಸಾಮರಸ್ಯದ ಕರ್ನಾಟಕಕ್ಕಾಗಿ, ದುಡಿಯುವ ಜನರ ಹಕ್ಕುಗಳು ಹಾಗೂ ಜೀವನೋಪಾಯ ರಕ್ಷಣೆಗಾಗಿ, ಕಾರ್ಪೊರೇಟ್ ಪ್ರೇರಿತ ಕಾರ್ಮಿಕ ವಿರೋಧಿ ನೀತಿಗಳು ವಿರುದ್ದದ ಕಾರ್ಮಿಕರ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡುತಿದ್ದರು.
ಕಾರ್ಮಿಕರು 12ಗಂಟೆಗಳ ಕೆಲಸ ಮಾಡಬೇಕೆಂಬ ಅವೈಜ್ಞಾನಿಕ ಕಾಯಿದೆ ಜಾರಿಗೆ ಬಂದರೆ ಕಾರ್ಮಿಕರು ಅನಾರೋಗ್ಯಕ್ಕೆ ಒಳಗಾಗಬೇಕಾಗುತ್ತದೆ. ಬ್ರಿಟೀಷರ ಕಾಲದಿಂದ ಇದ್ದ 44 ಕಾರ್ಮಿಕರ ಕಾಯಿದೆಯನ್ನು ಕಾರ್ಮಿಕರ ಪರವಾಗಿ ಬದಲಾವಣೆ ಮಾಡುವ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಮಾಡಲಾಗಿದೆ. ಸರಕಾರಿ ಇಲಾಖೆಯಲ್ಲಿ ಖಾಯಂ ನೌಕರ ಸಂಖ್ಯೆ ಕಡಿಮೆ ಯಾಗಿ ಹೊರಗುತ್ತಿಗೆ ಆಧಾರಿತ ನೌಕರರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದರು.
ಯಾವುದೇ ವೇತನ ಕೊಡದೆ 60ವರ್ಷ ಮೇಲ್ಪಟ್ಟ 10ಸಾವಿರ ಬಿಸಿಯೂಟ ಕಾರ್ಮಿಕರನ್ನು ಕಳೆದ 2 ವರ್ಷಗಳಲ್ಲಿ ಕೆಲಸದಿಂದ ವಜಾಗೊಳಿಸಲಾಗಿದೆ. ಕೋಮುವಾದ ಮೂಲಕ ಕಾರ್ಮಿಕರ ಐಕ್ಯತೆಯನ್ನು ಒಡೆಯಲಾಗುತ್ತಿದೆ. ಇದು ಕಾರ್ಮಿಕರ ಹಿತದೃಷ್ಠಿಗೆ ನಷ್ಟ ಉಂಟು ಮಾಡುತ್ತಿದೆ. ಆದುದರಿಂದ ಪ್ರತಿ ಯೊಬ್ಬರು ಕಾರ್ಮಿಕರ ಪರವಾಗಿರುವವರಿಗೆ ಮತಗಳನ್ನು ನೀಡಬೇಕು ಎಂದು ಅವರು ತಿಳಿಸಿದರು.
ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಕೆ.ಶಂಕರ್ ಮಾತನಾಡಿ, ಕೋಮುವಾದಿ ಬಿಜೆಪಿ ಪಕ್ಷವನ್ನು ಕೇಂದ್ರ ಮತ್ತು ರಾಜ್ಯದಲ್ಲಿ ಸೋಲಿಸುವ ಮತ್ತು ಜಾತ್ಯತೀತ ಪಕ್ಷಗಳಿಗೆ ಬೆಂಬಲ ಕೊಡುವ ಉದ್ದೇಶದಿಂದ ಕಾರ್ಮಿಕರ ಪ್ರಣಾಳಿಕೆಯನ್ನು ರಚಿಸಲಾಗಿದೆ. ಈ ಪ್ರಣಾಳಿಕೆ ಯನ್ನು ಕಾರ್ಮಿಕರ ಮಧ್ಯೆ ಕೊಂಡೊಯ್ದು ಸರಕಾರದ ಜನವಿರೋಧಿ ಹಾಗೂ ಕಾರ್ಮಿಕರ ವಿರೋಧಿ ನೀತಿಗಳನ್ನು ಜನರಿಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಮಾತನಾಡಿ, ಡಬಲ್ ಇಂಜಿನ್ ಸರಕಾರಗಳು ಕಾರ್ಮಿಕ ವಿರೋಧಿ ನಡೆ ಅನುಸರಿಸುತ್ತಿದೆ. ಬಿಸಿಯೂಟ ನೌಕರರಿಗೆ ವೇತನ ನೀಡದೆ ಶೋಷಣೆ ಮಾಡಲಾಗುತ್ತಿದೆ. ಹೆಂಚು ಉದ್ಯಮಕ್ಕೆ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ. ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ನೀಡಲು ಕ್ರಮ ತೆಗೆದು ಕೊಳ್ಳುತ್ತಿಲ್ಲ. ಉದ್ಯೋಗ ಖಾತ್ರಿ ಹಣವನ್ನು ಕಡಿತಗೊಳಿಸಲಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಕಾರ್ಮಿಕ ವಿರೋಧಿ ಹಾಗೂ ಕೋಮುವಾದಿ ಬಿಜೆಪಿಯನ್ನು ಸೋಲಿಸುವ ನಿಲುವವನ್ನು ತೆಗೆದುಕೊಂಡಿದ್ದೇವೆ. 25 ಅಂಶಗಳ ಈ ಪ್ರಣಾಳಿಕೆ ಯನ್ನು ಜನರ ಮುಂದೆ ತೆಗೆದುಕೊಂಡು ಹೋಗಿ ಕೋಮು ವಾದಿ ಬಿಜೆಪಿ ಪಕ್ಷವನ್ನು ಸೋಲಿಸಲು ಕರೆ ನೀಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಶಶಿಧರ್ ಗೊಲ್ಲ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಉಪಸ್ಥಿತರಿದ್ದರು.
ನಮ್ಮ ಬ್ಯಾಂಕ್‌ಗಳನ್ನು ಉತ್ತರ ಭಾರತದ ಬ್ಯಾಂಕ್‌ಗಳನ್ನು ವಿಲೀನ ಮಾಡಿ, ಇದೀಗ ನಂದಿನಿ ಹಾಲನ್ನು ಗುಜರಾತಿನ ಅಮುಲು ಜೊತೆ ವಿಲೀನ ಮಾಡಲು ಬಿಜೆಪಿ ಸರಕಾರ ಮುಂದಾಗಿದೆ. ಈ ರೀತಿಯಾದರೆ ಮುಂದೆ ಕರ್ನಾಟಕದ ಅಸ್ತಿತ್ವ ಇಲ್ಲವಾಗುತ್ತದೆ. ಆದುದರಿಂದ ರೈತರು ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು.
-ಶಶಿಧರ್ ಗೊಲ್ಲ, ಖಜಾಂಚಿ, ಸಿಐಟಿಯು ಉಡುಪಿ ಜಿಲ್ಲೆ