40% ಕಮಿಷನ್ ಪಡೆಯುವ ಬಿಜೆಪಿ ಸರ್ಕಾರವನ್ನು ತೊಲಗಿಸಿ: ಮಲ್ಲಿಕಾರ್ಜುನ ಖರ್ಗೆ ಕರೆ
ಸುಳ್ಯದಲ್ಲಿ ಕಾಂಗ್ರೆಸ್ ನಿಂದ ಬೃಹತ್ ಸಾರ್ವಜನಿಕ ಸಭೆ

ಸುಳ್ಯ: ರಾಜ್ಯದಲ್ಲಿ ಈಗ ಇರುವುದು ಶೇ. 40 ಕಮಿಷನ್ ಪಡೆಯುವ ಕೆಟ್ಟ ಸರಕಾರ. 5 ವರ್ಷದಿಂದ ಭ್ರಷ್ಟಾಚಾರ ನಡೆಸಿ ಹೊಟ್ಟೆ ತುಂಬಿಸಿದ್ದೆ ಇವರ ಸಾಧನೆ. ಇಂತಹ ಕೆಟ್ಟ ಬಿಜೆಪಿ ಸರಕಾರವನ್ನು ಮುಂದಿನ ಚುನಾವಣೆಯಲ್ಲಿ ರಾಜ್ಯದಿಂದಲೇ ತೊಲಗಿಸಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಸುಳ್ಯ ಮತ್ತು ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ನೇತೃತ್ವದಲ್ಲಿ ಮಂಗಳವಾರ ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿಯವರಿಗೆ ಅಭಿವೃದ್ಧಿ ಬೇಕಿಲ್ಲ. ಅಧಿಕಾರ ಸಿಕ್ಕಿದರೆ ಸಾಕು. ಅಧಿಕಾರ ಪಡೆಯುವುದಕ್ಕೋಸ್ಕರ ಗಲಭೆ ಸೃಷ್ಟಿಸುತ್ತಾರೆ. ಜೀವ ತೆಗಿತಾರೆ. ಸಮಾಜವನ್ನು ಒಡೆಯುವ ಮೂಲಕ ಜಾತಿ ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುತ್ತಾರೆ ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ನಾನು ತಿನ್ನುವುದಿಲ್ಲ. ತಿನ್ನುವವರನ್ನು ಬಿಡುವುದಿಲ್ಲ ಎಂದು ಭಾಷಣದಲ್ಲಿ ಹೇಳುತ್ತಾರೆ. ಆದರೆ ಅವರ ಪಕ್ಕದಲ್ಲೇ ಕಮಿಷನ್ ಪಡೆಯುವವರೇ ಕುಳಿತಿರುತ್ತಾರೆ. ಕಣ್ಣೆದುರೇ ಭ್ರಷ್ಟಾಚಾರ ನಡೆದರೂ ಮೋದಿ ಮಾತನಾಡುವುದಿಲ್ಲ ಎಂದು ಆರೋಪಿಸಿದ ಖರ್ಗೆಯವರು, ಒಂದು ಸೂಜಿಯನ್ನು ತಯಾರಿಸಲು ಶಕ್ತವಲ್ಲದ ಭಾರತದಲ್ಲಿ ದೊಡ್ಡ ದೊಡ್ಡ ಕಾರ್ಖಾನೆ ಆರಂಭಿಸಿದ್ದು, ರಾಕೆಟ್ ಹಾರಿಸುವ ಮಟ್ಟಕ್ಕೆ ದೇಶ ಅಭಿವೃದ್ಧಿಯಾದದ್ದು ಕಾಂಗ್ರೆಸ್ ಸರ್ಕಾರ ಮಾಡಿದ ಸಾಧನೆಯಿಂದ. ಆದರೆ ಈಗ ಬಿಜೆಪಿಯವರು 70 ವರ್ಷದಲ್ಲಿ ನೀವೇನು ಮಾಡಿದ್ದೀರಿ ಎಂದು ಪ್ರಶ್ನಿಸುತ್ತಾರೆ. ಬೆಲೆ ಏರಿಕೆಯಿಂದ ಜನರನ್ನು ದಿವಾಳಿಯಾಗಿಸಿದ್ದು, ಬ್ಯಾಂಕ್‍ಗಳ ಸ್ವಾತಂತ್ರ್ಯವನ್ನು ಕಸಿದುಕೊಂಡದ್ದು ಬಿಜೆಪಿ ಸರ್ಕಾರದ ಸಾಧನೆ. ಬಿಜೆಪಿಯವರು ಯಾವುದೇ ಅಭಿವೃದ್ಧಿ ಮಾಡಲು ಹೋಗಿಲ್ಲ. ರೈಲು ಹೊರಡುವಾಗ ಹಸಿರು ಬಾವುಟ ಹಿಡಿದು ಸಣ್ಣ ಸಣ್ಣ ವಿಷಯದಲ್ಲಿ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಐಸಿಸಿಯ ಮಹಿಳಾ ವೀಕ್ಷಕಿಯಾಗಿ ಆಗಮಿಸಿದ ಶಿಭಾ ರಾಮಚಂದ್ರನ್, ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ರಾಜ್ಯ ಚುನಾವಣಾ ಸಹ ಉಸ್ತುವಾರಿ ಮಂಜುನಾಥ ಭಂಡಾರಿ, ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಮಾತನಾಡಿದರು.
ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎಐಸಿಸಿ ವೀಕ್ಷಕರಾದ ಸುನಿಲ್ ಕೇದಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಧನಂಜಯ ಅಡ್ಪಂಗಾಯ, ಚುನಾವಣಾ ಉಸ್ತುವಾರಿ ಎಂ.ವೆಂಕಪ್ಪ ಗೌಡ, ಎನ್.ಜಯಪ್ರಕಾಶ್ ರೈ, ಟಿ.ಎಂ.ಶಹೀದ್, ಡಾ.ರಘು, ಸದಾನಂದ ಮಾವಜಿ, ಸುೀರ್ ಕುಮಾರ್ ರೈ, ಕೆ.ಎಂ.ಮಸೂದ್, ಇಬ್ರಾಹಿಂ ಕೋಡಿಚ್ಚಾಲ್, ಕಾವು ಹೇಮನಾಥ ಶೆಟ್ಟಿ, ಶಾಲೆಟ್ ಪಿಂಟೋ, ರಾಜೀವಿ ಆರ್. ರೈ, ಸವಾದ್ ಸುಳ್ಯ, ಲೂಕ್ಮನ್ ಬಂಟ್ವಾಳ್, ಸತೀಶ್ ಕೆಡೆಂಜಿ, ಎಸ್.ಸಂಶುದ್ದೀನ್, ಕೆ.ಎಂ.ಮುಸ್ತಫಾ, ಹಮೀದ್ ಕುತ್ತಮೊಟ್ಟೆ, ಸರಸ್ವತಿ ಕಾಮತ್, ಪ್ರಹ್ಲಾದ್ ಬೆಳ್ಳಿಪ್ಪಾಡಿ, ವಹಿದಾ ಇಸ್ಮಾಯಿಲ್ ಮೊದಲಾದವರು ವೇದಿಕೆಯಲ್ಲಿದ್ದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಸ್ವಾಗತಿಸಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಕಾರ್ಯಕ್ರಮ ನಿರೂಪಿಸಿದರು.
