30ನೇ ದಿನಕ್ಕೆ ಕಾಲಿಟ್ಟ ಪಾಲೇಮಾಡು ನಿವಾಸಿಗಳ ಧರಣಿ; ನಾಳೆಯಿಂದ ಅರೆಬೆತ್ತಲೆ ಪ್ರತಿಭಟನೆಗೆ ನಿರ್ಧಾರ

ಮಡಿಕೇರಿ ಏ.25 : ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡು ಕಾನ್ಶಿರಾಂ ನಗರದ ನಿವಾಸಿಗಳು ಎ.27 ರಿಂದ ಅರೆಬೆತ್ತಲೆ ಪ್ರತಿಭಟನೆ ಆರಂಭಿಸಲು ನಿರ್ಧರಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕಳೆದ 30 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಆಡಳಿತ ವ್ಯವಸ್ಥೆ ಯಾವುದೇ ಸ್ಪಂದನೆ ನೀಡದ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಹೋರಾಟಗಾರರ ಪರವಾಗಿ ಸ್ಥಳೀಯ ನಿವಾಸಿ ಎಂ.ಎಸ್.ಆನಂದ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡ ಮತ್ತಿತರ ದುರ್ಬಲ ವರ್ಗದ 260 ಕುಟುಂಬಗಳು ವಾಸ ಮಾಡುತ್ತಿರುವ ನಿವೇಶನದ ಹಕ್ಕುಪತ್ರದ ಲೋಪದೋಷಗಳನ್ನು ಸರಿಪಡಿಸಬೇಕು ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿ ಗ್ರಾಮದಲ್ಲೇ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಈ ಬೇಡಿಕೆಗಳ ಕುರಿತು ಸೂಕ್ತ ಭರವಸೆ ನೀಡಬೇಕು. ತಪ್ಪಿದಲ್ಲಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆಯನ್ನು ಕೂಡ ನೀಡಲಾಗಿತ್ತು. ಆದರೆ ಬಡವರ ಹೋರಾಟಕ್ಕೆ ಬೆಲೆ ಇಲ್ಲ ಎಂಬಂತೆ ಇಲ್ಲಿಯವರೆಗೆ ಯಾರೂ ನಮ್ಮನ್ನು ವಿಚಾರಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮಹಿಳೆಯರು, ಪುರುಷರು, ಮಕ್ಕಳಾದಿಯಾಗಿ ಧರಣಿ ನಡೆಸುತ್ತಿದ್ದರೂ ನಮ್ಮ ಮತವೇ ಬೇಡ ಎನ್ನುವ ರೀತಿಯಲ್ಲಿ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೋರಾಟದ ಮುಂದಿನ ಭಾಗವಾಗಿ ಅರೆಬೆತ್ತಲೆ ಪ್ರತಿಭಟನೆಯನ್ನು ಆರಂಭಿಸಲಾಗುತ್ತಿದೆ. ಇದಕ್ಕೂ ಸ್ಪಂದನೆ ದೊರೆಯದಿದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿರುವುದಾಗಿ ಆನಂದ ತಿಳಿಸಿದ್ದಾರೆ.





