ಬಿಜೆಪಿಯಿಂದ ಮಾತ್ರ ದೇಶದ ವಿಕಸನ, ಅಭಿವೃದ್ದಿ ಸಾಧ್ಯ: ಕೇಂದ್ರ ಸಚಿವ ಬಿ.ಎಲ್.ವರ್ಮ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಸಮರ್ಥ ನಾಯಕತ್ವದಲ್ಲಿ ದೇಶದಲ್ಲಿ ಅಮೂಲಾಗ್ರ ಬದಲಾವಣೆಯಾಗಿದ್ದು, ಬಿಜೆಪಿಯಿಂದ ದೇಶದ ವಿಕಸನ, ಅಭಿವೃದ್ದಿ ನಾಗಲೋಟದಲ್ಲಿ ಸಾಧ್ಯವಾಗಿದೆ ಎಂದು ಕೇಂದ್ರ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಖಾತೆ ಸಚಿವ ಬಿ.ಎಲ್.ವರ್ಮ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ, ನಗರ ಮತ್ತು ಗ್ರಾಮಾಂತರ ಬಿಜೆಪಿ ವತಿಯಿಂದ ಉಡುಪಿ ಆಶಿರ್ವಾದ್ ಮಲ್ಪೆ ಕ್ರಾಸ್‌ನಿಂದ ಸಂತೆಕಟ್ಟೆ ಜಂಕ್ಷನ್‌ವರೆಗೆ ಮಂಗಳವಾರ ನಡೆದ ರೋಡ್ ಶೋ ಹಾಗೂ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
2014ರ ಹಿಂದಿನ ಭಾರತಕ್ಕೂ ಪ್ರಸ್ತುತ ಭಾರತಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಆ ಸಮಯದಲ್ಲಿ ಇಡೀ ದೇಶ ಭ್ರಷ್ಟಾಚಾರದಿಂದ ನಲುಗಿತ್ತು. ಭ್ರಷ್ಟಾಚಾರ ನಿಯಂತ್ರಣ, ಜನಪರ ಕೆಲಸ ಕಾರ್ಯಗಳು ಹಿಂದೆಂದೂ ಆಗಿರದ ಅಭಿವೃದ್ಧಿ ಕೆಲಸಗಳು ಮೋದಿ ಆಡಳಿತದಲ್ಲಿ ಆಗಿದೆ ಎಂದರು.
ಉಡುಪಿ ಶಾಸಕ ಕೆ.ರಘುಪತಿ ಭಟ್, ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಎ.ಸುವರ್ಣ ಮಾತನಾಡಿ ದರು. ಈ ಸಂದರ್ಭದಲ್ಲಿ ಕಡೆಕಾರು ಗ್ರಾಪಂ ಸದಸ್ಯ ಸತೀಶ್ ಕೋಟ್ಯಾನ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಮುಂಬೈ ಸಂಸದ ಗೋಪಾಲ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ನಗರ ಅಧ್ಯಕ್ಷ ಮಹೇಶ್ ಠಾಕೂರ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್, ರಾಘವೇಂದ್ರ ಕಿಣಿ ಮೊದಲಾದವರು ಉಪಸ್ಥಿತರಿದ್ದರು.







