ಉಡುಪಿ: ಪಿಪಿಸಿಯಲ್ಲಿ ವಿದ್ಯಾರ್ಥಿಗಳ ಕುತೂಹಲ ಕೆರಳಿಸಿದ ‘ಶೂನ್ಯ ಬೆಳಕಿನ ದಿನ’

ಉಡುಪಿ : ವರ್ಷದಲ್ಲಿ ಎರಡು ದಿನ ಸಂಭವಿಸುವ ‘ಶೂನ್ಯ ಬೆಳಕಿನ ದಿನ’ದ ಖಗೋಳ ವಿದ್ಯಮಾನವನ್ನು ಇಂದು ಪೂರ್ಣಪ್ರಜ್ಞ ಕಾಲೇಜಿನಲ್ಲಿ ನೆರೆದ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಖಗೋಳದಲ್ಲಿ ಆಸಕ್ತರಾಗಿರುವ ನಾಗರಿಕರು ಕುತೂಹಲದಿಂದ ವೀಕ್ಷಿಸಿದರು.
ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು ಸಾರ್ವಜನಿಕರಿಗೆ ಈ ವೀಕ್ಷಣಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಪರಾಹ್ನ 12.29ಕ್ಕೆ ವಿವಿಧ ವಸ್ತುಗಳ ನೆರಳುಗಳು ಕಣ್ಮರೆಯಾಗುವುದನ್ನು ವಿದ್ಯಾರ್ಥಿಗಳು ಕುತೂಹಲದಿಂದ ಗಮನಿಸಿದರು.
ಪಿಎಎಸಿಯ ವಿದ್ಯಾರ್ಥಿಗಳು ಹಲವಾರು ವಸ್ತುಗಳನ್ನು ತಂದು ಈ ನಿರ್ದಿಷ್ಟ ಸಮಯದಲ್ಲಿ ಶೂನ್ಯ ನೆರಳಿನ ವಿದ್ಯಮಾನವನ್ನು ನೋಡಿ ಆನಂದಿಸಿದರು. ಶೂನ್ಯ ನೆರಳಿನ ವೇಳೆ ಮಾತ್ರ ಪ್ರದರ್ಶಿಸಬಹುದಾದ ಕೆಲವು ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಪಿಎಎಸಿಯ ಸ್ಥಾಪಕ ಸಂಯೋಜಕ ಹಾಗೂ ಉಡುಪಿ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎ.ಪಿ.ಭಟ್, ವಿದ್ಯಾರ್ಥಿಗಳಿಗೆ ಈ ವಿದ್ಯಮಾನದ ಹಿಂದಿನ ಖಗೋಳ ವಿಜ್ಞಾನವನ್ನು ಮನದಟ್ಟಾಗುವಂತೆ ವಿವರಿಸಿದರು.
ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಘವೇಂದ್ರ ಎ., ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರತಿಭಾ ಸಿ. ಆಚಾರ್ಯ, ಐಕ್ಯೂಎಸಿ ಸಂಯೋಜಕ ಡಾ.ವಿನಯ್ ಕುಮಾರ್, ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಯೋಜಕರಾದ ಪ್ರಾಧ್ಯಾಪಕ ಅತುಲ್ ಭಟ್ ಕಾರ್ಯಕ್ರಮ ಸಂಯೋಜಿಸಿದರು.

