ದಿಲ್ಲಿಯಲ್ಲಿ ಕೂತು ರಾಜ್ಯವನ್ನಾಳಲು ರಾಜಪ್ರಭುತ್ವ ಅಲ್ಲ, ಇದು ಪ್ರಜಾಪ್ರಭುತ್ವ: ಅಮಿತ್ ಶಾಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು, ಎ.25: ದಿಲ್ಲಿಯಲ್ಲಿ ಕೂತು ರಾಜ್ಯವನ್ನು ಆಳಲು ಇದು ರಾಜಪ್ರಭುತ್ವ ವ್ಯವಸ್ಥೆ ಅಲ್ಲ, ಪ್ರಜಾಪ್ರಭುತ್ವ ಎಂಬುದು ರಾಜ್ಯ ಬಿಜೆಪಿ ನಾಯಕರಿಗೆ ಅರ್ಥವಾಗುವ ಕಾಲ ಸಮೀಪಿಸುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
‘ಕರ್ನಾಟಕವನ್ನು ನರೇಂದ್ರ ಮೋದಿ ಅವರ ಕೈಗೆ ಕೊಡುವ ಚುನಾವಣೆಯಿದು’ ಎಂಬ ಅಮಿತ್ ಶಾ ಅವರ ಹೇಳಿಕೆ ಕುರಿತಾಗಿ ಮಂಗಳವಾರ ಪ್ರತಿಕ್ರಿಯಿಸಿರುವ ಅವರು, ಇದು ಕರ್ನಾಟಕದ ಭವಿಷ್ಯವನ್ನು ನರೇಂದ್ರ ಮೋದಿ ಅವರ ಕೈಯಲ್ಲಿ ಕೊಡುವ ಚುನಾವಣೆ ಎಂಬ ಸತ್ಯವನ್ನೇ ಅಮಿತ್ ಶಾ ಹೇಳಿದ್ದು, ರಾಜ್ಯದ ಭವಿಷ್ಯವನ್ನು ನೋಡಿಕೊಳ್ಳಲು ಒಬ್ಬ ಕನ್ನಡಿಗನೂ ಇಲ್ಲದಷ್ಟು ಬಿಜೆಪಿ ದಿವಾಳಿಯಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆಯುವ ಚುನಾವಣೆಯಲ್ಲಿ ಮತದಾರರು ಆಯ್ಕೆ ಮಾಡುವುದು ತಮ್ಮ ಸೇವೆ ಮಾಡುವ ಪ್ರತಿನಿಧಿಗಳನ್ನೆ ಹೊರತು, ದೆಹಲಿ ದೊರೆಯ ಸೇವೆ ಮಾಡುವ ಗುಲಾಮರನ್ನಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗಷ್ಟೇ ಅಲ್ಲ ಸ್ವಾಭಿಮಾನಿ ಕನ್ನಡಿಗರಿಗೂ ಅಮಿತ್ ಶಾ ಅವಮಾನ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮೋದಿ ಹಾಗೂ ಅಮಿತ್ ಶಾ ಅವರು ರಾಜ್ಯದ ಬ್ಯಾಂಕುಗಳು, ಬಂದರು, ವಿಮಾನ ನಿಲ್ದಾಣಗಳನ್ನು ಗುಜರಾತಿ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದು, ನಮ್ಮ ಹೆಮ್ಮೆಯ ನಂದಿನಿಯನ್ನೂ ಕಬಳಿಸಲು ಹೊಂಚು ಹಾಕುತ್ತಿದ್ದು, ಈಗ ಇಡೀ ಕರ್ನಾಟಕವನ್ನೇ ಖರೀದಿಸಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬಿಜೆಪಿಯವರ ದುರಹಂಕಾರದ ಮಾತುಗಳಿಗೆ ರಾಜ್ಯದ ಸ್ವಾಭಿಮಾನಿ ಕನ್ನಡಿಗರು ಚುನಾವಣೆಯಲ್ಲಿಯೇ ಉತ್ತರ ನೀಡಲಿದ್ದಾರೆ. ಅಮಿತ್ ಶಾ ಅವರು ಗೋಲ್ವಾಲ್ಕರ್ ಅವರ ‘ಬಂಚ್ ಆಫ್ ಥಾಟ್ಸ್’ ಓದಿದರಷ್ಟೇ ಸಾಲದು, ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನೂ ಪುರುಸೊತ್ತು ಮಾಡಿಕೊಂಡು ಓದಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಕನ್ನಡದ ಕತ್ತು ಹಿಚುಕಿ ಹಿಂದಿ ಹೇರುವ ಕಟುಕತನ, ನಮ್ಮ ಹಿರೀಕರು ಕಟ್ಟಿ ಬೆಳೆಸಿದ ಸಂಪತ್ತನ್ನು ಕಬಳಿಸುವ ವ್ಯಾಪಾರಿ ಬುದ್ದಿ ಮತ್ತು ಇಲ್ಲಿನ ರಾಜಕೀಯ ನಾಯಕತ್ವವನ್ನೇ ನಾಶ ಮಾಡಿ ನಮ್ಮ ಮೇಲೆ ಸವಾರಿ ಮಾಡುವ ಅಮಿತ್ ಶಾ ಅವರ ಸರ್ವಾಧಿಕಾರಿ ಧೋರಣೆಯನ್ನು ಕನ್ನಡಿಗರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ದೇವಸ್ಥಾನದ ಆವರಣದಲ್ಲಿ ಶೂ ಧರಿಸಿ ನಿಂತ ಅಮಿತ್ ಶಾ ಫೋಟೊ ವೈರಲ್: ಕಾಂಗ್ರೆಸ್ ಕಿಡಿ