ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಎಲ್ಲಾ ಪ್ರಯತ್ನ: ಬಿ.ಎಲ್.ವರ್ಮಾ
ಉಡುಪಿ : ಕೇಂದ್ರ ಸರಕಾರದ ಎಲ್ಲಾ ಇಲಾಖೆಗಳ ಶೇ.10ರಷ್ಟು ಅನುದಾನವನ್ನು ಈಶಾನ್ಯದ ಎಂಟು ರಾಜ್ಯಗಳ ಅಭಿವೃದ್ಧಿಗೆ ಮೀಸಲಿಡುವ ಮೂಲಕ ಅವುಗಳನ್ನು ಪ್ರಗತಿಯ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದು ಕೇಂದ್ರದ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಬಿ. ಎಲ್. ವರ್ಮಾ ಹೇಳಿದ್ದಾರೆ.
ಮಂಗಳವಾರ ಕಡಿಯಾಳಿಯಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತಿದ್ದರು. ೨೦೧೪ರಿಂದ ಗಡಿ ರಾಜ್ಯಗಳಲ್ಲಿ ಬಾಂಗ್ಲಾ ಸಹಿತ ಅನ್ಯ ರಾಷ್ಟ್ರಗಳ ಅತಿಕ್ರಮಣ, ಅಕ್ರಮ ವಲಸೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿಪಕ್ಷಗಳ ಆಡಳಿತವಿದ್ದಾಗ ಅನುಸರಿಸಿದ ತುಷ್ಠೀಕರಣ ನೀತಿ ಯಿಂದಾಗಿ ವಲಸೆ ಬಂದವರು ಈ ನೆಲದ ಲಾಭ ಪಡೆಯುತ್ತಿದ್ದಾರೆ ಎಂದರು.
ಉತ್ತರ ಪ್ರದೇಶ ರಾಜ್ಯದಲ್ಲಿ ವ್ಯಾಪಕವಾಗಿದ್ದ ಗೂಂಡಾಗಿರಿ ಹಾಗೂ ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಡಿವಾಣ ಹಾಕಿದ್ದು ಕಾನೂನು, ಸುವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಆದರೆ ಕಾಂಗ್ರೆಸ್, ಸಮಾಜ ವಾದಿ ಪಕ್ಷ ಸಮಾಜದ್ರೋಹಿಗಳು, ದೇಶದ್ರೋಹಿಗಳ ಜತೆ ಶಾಮೀಲಾಗಿವೆ. ಪ್ರಧಾನಿ ಮೋದಿಯವರ ಪ್ರಬಲ ನಾಯಕತ್ವದಲ್ಲಿ ಸಬ್‌ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯಂತೆ ಅಭಿವೃದ್ಧಿ ಪಥದಲ್ಲಿ ದೇಶ ಸಾಗುತ್ತಿದೆ ಎಂದರು.
ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು ಡಬಲ್ ಎಂಜಿನ್ ಸರಕಾರವನ್ನು ಮುಂದುವರಿಸುವುದ ಕ್ಕಾಗಿ ಕೇಂದ್ರ, ರಾಜ್ಯಗಳ ನಾಯಕರ ಸಹಿತ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿದ್ದಾರೆ. 2014ರ ಮೊದಲು ಕಾಂಗ್ರೆಸ್ 7.11 ಲಕ್ಷ ಕೋಟಿ ರೂ. ಭ್ರಷ್ಟಾಚಾರವೆಸಗಿದ್ದು ಜನಧನ್ ಖಾತೆ ಮೂಲಕ ಸಹಾಯಧನದ ಸೋರಿಕೆ ತಡೆಗಟ್ಟಲಾಗಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಆಡಳಿತ ಜಾರಿಗೆ ತಂದ ಗೋಹತ್ಯಾ ನಿಷೇಧ, ಮತಾಂತರ ನಿಷೇಧ ಕಾಯಿದೆಯನ್ನು ಕಾಂಗ್ರೆಸ್ ಆಡಳಿತಕ್ಕೆ ಬಂದರೆ ರದ್ದು ಮಾಡುವ ಭರವಸೆ ನೀಡಿದ್ದು ಜನತೆ ಕಾಂಗ್ರೆಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವರ್ಮಾ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ನಾಯಕರಾದ ಮಹೇಶ್ ಠಾಕೂರ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ದಿನೇಶ್ ಅಮೀನ್, ಕೆ.ರಾಘವೇಂದ್ರ ಕಿಣಿ, ರೋಶನ್ ಶೆಟ್ಟಿ ಉಪಸ್ಥಿತರಿದ್ದರು.