ವಿಶ್ವಸಂಸ್ಥೆ ಚರ್ಚೆಯಲ್ಲಿ ಜಮ್ಮು-ಕಾಶ್ಮೀರ ಕುರಿತು ಪಾಕ್ ಹೇಳಿಕೆಗಳನ್ನು ತಳ್ಳಿಹಾಕಿದ ಭಾರತ

ಹೊಸದಿಲ್ಲಿ,ಎ.25: ವಿಶ್ವಸಂಸ್ಥೆಯಲ್ಲಿ ಜಮ್ಮು-ಕಾಶ್ಮೀರ ಕುರಿತು ಪಾಕಿಸ್ತಾನದ ಹೇಳಿಕೆಗಳನ್ನು ಸೋಮವಾರ ತಳ್ಳಿಹಾಕಿರುವ ಭಾರತವು,ಇಂತಹ ಕುಚೇಷ್ಟೆಯ ಹೇಳಿಕೆಗಳಿಗೆ ತಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪರಿಣಾಮಕಾರಿ ಬಹುಪಕ್ಷೀಯ ವ್ಯವಸ್ಥೆಯ ಕುರಿತು ಬಹಿರಂಗ ಚರ್ಚೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಮುನೀರ್ ಅಕ್ರಂ ಅವರು, ಭಾರತವು ಬಲಪ್ರಯೋಗ ಮತ್ತು ವಂಚನೆಯ ಮೂಲಕ ಕಾಶ್ಮೀರಿ ಜನರ ಹಕ್ಕುಗಳನ್ನು ಬುಡಮೇಲುಗೊಳಿಸಿದೆ ಮತ್ತು ದಮನಿಸಿದೆ ಎಂದು ಆರೋಪಿಸಿದ್ದರು.
ಭದ್ರತಾ ಮಂಡಳಿಯು ದೊಡ್ಡ ಮತ್ತು ಶಕ್ತಿಶಾಲಿ ದೇಶಗಳ ವಿಸ್ತೃತ ಕೂಟವಾಗಿರುವ ಬದಲು ಹೆಚ್ಚು ಪ್ರಾತಿನಿಧಿಕ, ಉತ್ತರದಾಯಿ, ಪ್ರಜಾಸತ್ತಾತ್ಮಕ,ಪಾರದರ್ಶಕ ಮತ್ತು ಪರಿಣಾಮಕಾರಿ ಆಗಿರಬೇಕು ಎಂದು ಅಕ್ರಂ ಆಗ್ರಹಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು,ಪಾಕಿಸ್ತಾನದ ಹೇಳಿಕೆಗಳು ಅಜ್ಞಾನದಿಂದ ಮತ್ತು ವಸಾಹತುಶಾಹಿಯಿಂದ ವಿಮೋಚನೆಯ ಮೂಲ ಅಂಶಗಳ ತಿಳುವಳಿಕೆಯ ಕೊರತೆಯಿಂದ ಹುಟ್ಟಿಕೊಂಡಿವೆ ಎಂದು ಹೇಳಿದರು.
‘ಈ ಹೇಳಿಕೆಗಳಿಗೆ ಉತ್ತರಿಸಲು ಭದ್ರತಾ ಮಂಡಳಿಯ ಸಮಯವನ್ನು ನಾನು ವ್ಯರ್ಥಗೊಳಿಸುವುದಿಲ್ಲ. ನಾವು ಈ ಹಿಂದೆ ವ್ಯಕ್ತಪಡಿಸಿದ್ದ,ಉತ್ತರಿಸಲು ನಮಗಿರುವ ಹಲವಾರು ಹಕ್ಕುಗಳನ್ನು ಗಮನಿಸಿ ಎನ್ನುವುದು ಪಾಕಿಸ್ತಾನದ ನಿಯೋಗಕ್ಕೆ ನಮ್ಮ ಸಲಹೆಯಾಗಿದೆ ’ಎಂದರು.
ಕಳೆದ ಮಾರ್ಚ್ ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಹಿಳೆಯರು, ಶಾಂತಿ ಮತ್ತು ಭದ್ರತೆ ಕುರಿತು ಚರ್ಚೆಯಲ್ಲಿ ಕಾಶ್ಮೀರ ವಿಷಯವನ್ನೆತ್ತಲು ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದ ಭಾರತವು,ಅದು ದುರುದ್ದೇಶಪೂರಿತ ಮತ್ತು ಸುಳ್ಳು ಪ್ರಚಾರವಾಗಿದೆ ಎಂದು ಹೇಳಿತ್ತು.







