ಸೋಲಿನ ಭಯದಿಂದ ಸುಳ್ಳು ಸುದ್ದಿ, ಅಪಪ್ರಚಾರಗಳ ಮೊರೆ ಹೋಗಿರುವ ಬಿಜೆಪಿ: ಇನಾಯತ್ ಅಲಿ
ವಿವಿಧ ಪಕ್ಷಗಳ ಹಲವು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಇಂದು ಮುತ್ತೂರು ಗ್ರಾಮ ವ್ಯಾಪ್ತಿಯ ಮನೆ ಮನೆಗೆ ತೆರಳಿ ಕಾಂಗ್ರೆಸ್ ನ ನಾಲ್ಕು ಗ್ಯಾರಂಟಿಗಳ ಕುರಿತು ಮಾಹಿತಿ ನೀಡಿ, ಕ್ಷೇತ್ರದ ಪ್ರಗತಿಗಾಗಿ ಕಾಂಗ್ರೆಸ್ ಗೆ ಬೆಂಬಲ ನೀಡುವಂತೆ ಜನರಲ್ಲಿ ಮತ ಯಾಚಿಸಿದರು.
ಬಿಜೆಪಿ ಪಕ್ಷ ಇಂದು ಕ್ಷೇತ್ರದಲ್ಲಿ ಸೋಲಿನ ಭಯದಿಂದ ಸುಳ್ಳು ಸುದ್ದಿ, ಅಪಪ್ರಚಾಗಳ ಮೊರೆ ಹೋಗಿದೆ ಎಂದು ಹೇಳಿದರು.
ಚುನಾವಣಾ ಪ್ರಚಾರದ ಭಾಗವಾಗಿ ಇಂದು ಮುತ್ತೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ನೌಶಾದ್ ಮುತ್ತೂರು ಅವರ ನಿವಾಸದಲ್ಲಿ ಸಭೆ ನಡೆಸಿ ಮಾತನಾಡಿ, ಮಂಗಳೂರು ಉತ್ತರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತ ನೀಡುವಂತೆ ಕೋರಿದ್ದೇನೆ. ಈ ವೇಳೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜನವಿರೋಧಿ ಬಿಜೆಪಿ ಸರಕಾರಕ್ಕೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಬೆಂಬಲ ನೀಡುವುದಿಲ್ಲ. ಕ್ಷೇತ್ರದ ತುಂಬಾ ಕಾರ್ಯಕರ್ತರು ಹುಮ್ಮಸ್ಸಿನಿಂದ ಪ್ರಚಾರ ನಡೆಸುತ್ತಿದ್ದು ಗೆಲ್ಲುವ ವಿಶ್ವಾಸ ದುಪ್ಪಟ್ಟಾಗಿದೆ ಎಂದರು.
ಈ ವೇಳೆ ಹಲವರು ಇನಾಯತ್ ಅಲಿ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.







