ನಾಲ್ಕು ರಾಜ್ಯಗಳ ಹಲವು ಸ್ಥಳಗಳಲ್ಲಿ ಪಿಎಫ್ಐ ಕಾರ್ಯಕರ್ತರ ವಿರುದ್ಧ ಎನ್ಐಎ ದಾಳಿ

ಹೊಸದಿಲ್ಲಿ,ಎ.25: ನಿಷೇಧಿತ ಪಿಎಫ್ಐ ವಿರುದ್ಧ ಮತ್ತೆ ದಾಳಿಯನ್ನು ಆರಂಭಿಸಿರುವ ಎನ್ಐಎ ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿಯ ಡಝನ್ಗೂ ಅಧಿಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.
ಬಿಹಾರದಲ್ಲಿಯ 12,ಉ.ಪ್ರದೇಶದ ಎರಡು ಹಾಗೂ ಪಂಜಾಬಿನ ಲೂಧಿಯಾನಾ ಮತ್ತು ಗೋವಾದ ತಲಾ ಒಂದು ಸ್ಥಳಗಳಲ್ಲಿ ಎನ್ಐಎ ಅಧಿಕಾರಿಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ನಿಷೇಧಿತ ಪಿಎಫ್ಐಗೆ ಸಂಬಂಧಿಸಿದ ಚಟುವಟಿಕೆಗಳ ತನಿಖೆಗಾಗಿ ಎನ್ಐಎ ತಂಡವು ಬಿಹಾರದ ದರ್ಭಂಗಾದ ಉರ್ದು ಮಾರ್ಕೆಟ್ ತಲುಪಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದರು. ಉರ್ದು ಮಾರ್ಕೆಟ್ ನಲ್ಲಿ ದಂತವೈದ್ಯ ಡಾ.ಸರಿಕ್ ರಝಾ ಮತ್ತು ಸಿಂಘವಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಶಂಕರಪುರ ಗ್ರಾಮದ ನಿವಾಸಿ ಮೆಹಬೂಬ್ ಅವರಿಗೆ ಸೇರಿದ ಸ್ಥಳಗಳಿಗೆ ದಾಳಿ ನಡೆದಿದೆ.
ಬಿಹಾರದ ಪೂರ್ವ ಚಂಪಾರಣ ಜಿಲ್ಲೆಯ ಕಾನ್ವಾ ಗ್ರಾಮದ ನಿವಾಸಿ ಸಜ್ಜಾದ್ ಅನ್ಸಾರಿ ನಿವಾಸದ ಮೇಲೂ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ಆತನ ಪಾನ್ ಕಾರ್ಡ್,ಆಧಾರ್ ಕಾರ್ಡ್ ಮತ್ತು ಇತರ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಸಜ್ಜಾದ್ ಕಳೆದ 14 ತಿಂಗಳುಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದಾನೆ ಎಂದು ಬಲ್ಲ ಮೂಲಗಳು ತಿಳಿಸಿವೆ.





