ದೇಶದ ಸಂವಿಧಾನ ಉಳಿಸಲು ಹೋರಾಟ ಅಗತ್ಯ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಮಂಗಳೂರು, ಎ.25: ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿ ಸಿಲುಕಿದೆ. ಇದನ್ನು ಉಳಿಸಲು ಎಲ್ಲರೂ ಹೋರಾಟ ಮಾಡಬೇಕಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಟಿಎಂಎ ಪೈ ಹಾಲ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈಗ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಸಂವಿಧಾನ, ಪ್ರಜಾಪ್ರಭುತ್ವದ ಪ್ರಕಾರ ನಡೆದುಕೊಳ್ಳುತ್ತಿಲ್ಲ. ಒಬ್ಬರಿಗೆ ಒಂದು ಕಾನೂನು, ಇನ್ನೊಬ್ಬರಿಗೆ ಇನ್ನೊಂದು ಕಾನೂನು ಎಂಬಂತೆ ನಡೆದುಕೊಳ್ಳುತ್ತಿದೆ. ಇಂತಹ ತಾರತಮ್ಯ ಹೋಗಲಾಡಿಸಲು ನಾವು ಹೋರಾಟ ಮಾಡಬೇಕಾಗಿದೆ ಎಂದರು.
ನನಗೆ ಟಿಕೆಟ್ ಸಿಗಲಿಲ್ಲ, ಕುರ್ಚಿ ಸಿಗಲಿಲ್ಲ, ಅವರು ನನ್ನಲ್ಲಿ ಮಾತನಾಡಲಿಲ್ಲ. ಇವರು ಮಾತನಾಡಲಿಲ್ಲ ಎಂದು ಸಣ್ಣಪುಟ್ಟ ವಿಚಾರಗಳಿಗೆ ಬೇಸರ ಮಾಡಿಕೊಳ್ಳುವುದು ಬೇಡ. ಸಂವಿಧಾನ ಉಳಿದರೆ ಕುರ್ಚಿ ಸಿಗುತ್ತದೆ, ಮಾತನಾಡಲು ಶಕ್ತಿ ಬರುತ್ತದೆ ಹಾಗೆಯೇ ಮಾಧ್ಯಮ ರಂಗ ಉಳಿಯುತ್ತದೆ. ಸಂವಿಧಾನ ಉಳಿಯದಿದ್ದರೆ ಯಾವುದು ಉಳಿಯುವುದಿಲ್ಲ ಎಂದು ಕಿವಿಮಾತು ನುಡಿದರು.
ಇವತ್ತಿನ ಪೀಳಿಗೆಗೆ ಸ್ವಾತಂತ್ರ್ಯ ಹೇಗೆ ಬಂತು, ಯಾವ ಪಕ್ಷ ಹೋರಾಟ ನಡೆಸಿತು, ಎಷ್ಟು ಜನ ತ್ಯಾಗ, ಬಲಿದಾನ ಮಾಡಿದರು ಎಂಬ ವಿಚಾರ ಇಂದಿನ ಪೀಳಿಗೆಗೆ ಗೊತ್ತಿಲ್ಲ. ಹಾಗೆಯೇ ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಗೊತ್ತಿಲ್ಲ. ಅವೆಲ್ಲವನ್ನೂ ಯುವ ಪೀಳಿಗೆಗೆ ತಿಳಿಸಿಕೊಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದರು.
ದೇಶದ ಸ್ವಾತಂತ್ರ್ಯಕ್ಕೆ ಮಂಗಳೂರಿನವರು ಸಾಕಷ್ಟು ದುಡಿದಿದ್ದಾರೆ. ಹೀಗೆ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸುವ ಜವಾಬ್ದಾರಿಯಾಗಿದೆ. ಸ್ವಾತಂತ್ರ್ಯದ ಬಳಿಕ 70 ವರ್ಷಗಳ ದೇಶವನ್ನಾಳಿದ ಕಾಂಗ್ರೆಸ್ ಏನು ಮಾಡಿಲ್ಲ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿಯ ಎಷ್ಟು ಜನರು ಬಲಿದಾನ ಮಾಡಿದ್ದಾರೆ, ಜೈಲಿಗೆ ಹೋಗಿದ್ದಾರೆ ಎಂದು ನಾವು ಅವರಲ್ಲಿ ಪ್ರಶ್ನಿಸಬೇಕಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಧುರೀಣರಾದ ಬಿ.ಇಬ್ರಾಹಿಂ, ಅಭಯ ಚಂದ್ರ ಜೈನ್, ಶಾಲೆಟ್ ಪಿಂಟೊ, ನವೀನ್ ಡಿ ಸೋಜ, ಪದ್ಮರಾಜ್ ಆರ್, ಮಮತಾ ಗಟ್ಟಿ, ನವೀನ್ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐವನ್ ಡಿಸೋಜ ವಂದಿಸಿದರು. ಮುಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು.







