ಏಕರೂಪ ನಾಗರಿಕ ಸಂಹಿತೆ:ಸುಪ್ರೀಂ ಮುಂದಿರುವ ಅರ್ಜಿಗಳ ಕುರಿತು ಮಾಹಿತಿ ಸಲ್ಲಿಸಲು ವಕೀಲರಿಗೆ ದಿಲ್ಲಿ ಹೈಕೋರ್ಟ್ ನಿರ್ದೇಶ

ಹೊಸದಿಲ್ಲಿ,ಎ.25: ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯ ಜಾರಿಯನ್ನು ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯು ಮೇಲ್ನೋಟಕ್ಕೆ ಅಂಗೀಕಾರಾರ್ಹವಲ್ಲ ಎಂದು ಮಂಗಳವಾರ ಹೇಳಿದ ದಿಲ್ಲಿ ಉಚ್ಚ ನ್ಯಾಯಾಲಯವು, ಇಂತಹುದೇ ವಿಷಯಗಳಲ್ಲಿ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಗಳ ಕುರಿತು ಮಾಹಿತಿಯನ್ನು ಒದಗಿಸುವಂತೆ ಅವರಿಗೆ ನಿರ್ದೇಶ ನೀಡಿತು.
‘ನೀವು ಆ ಮಾಹಿತಿಗಳನ್ನು ಸಲ್ಲಿಸಿ,ನಾವು ನೋಡುತ್ತೇವೆ. ಅರ್ಜಿಯು ಮೇಲ್ನೋಟಕ್ಕೆ ಅಂಗೀಕಾರಾರ್ಹವಾಗಿಲ್ಲ, ಅದು ಅಂಗೀಕಾರಾರ್ಹವೇ ಎನ್ನುವುದನ್ನು ನಾವು ಮೊದಲು ನೋಡುತ್ತೇವೆ ’ ಎಂದು ಮುಖ್ಯ ನ್ಯಾಯಮೂರ್ತಿ ಸತೀಶಚಂದ್ರ ಶರ್ಮಾ ಮತ್ತು ನ್ಯಾ.ಸುಬ್ರಮಣಿಯಂ ಪ್ರಸಾದ್ ಅವರ ಪೀಠವು ಉಪಾಧ್ಯಾಯ ಅವರಿಗೆ ತಿಳಿಸಿತು.
ಸರ್ವೋಚ್ಚ ನ್ಯಾಯಾಲಯವು ಲಿಂಗ ತಟಸ್ಥತೆ ಮತ್ತು ಧರ್ಮ ತಟಸ್ಥತೆ ಕಾನೂನುಗಳಿಗೆ ಸಂಬಂಧಿಸಿದಂತೆ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಗಳನ್ನು ಅಂಗೀಕರಿಸಲು ಮಾರ್ಚ್ನಲ್ಲಿ ನಿರಾಕರಿಸಿತ್ತು ಮತ್ತು ಇವು ಶಾಸಕಾಂಗದ ಅಧಿಕಾರಕ್ಕೊಳಪಟ್ಟಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿತ್ತು. 2015ರಲ್ಲಿ ಉಪಾಧ್ಯಾಯ ಯುಸಿಸಿಗೆ ಸಂಬಂಧಿಸಿದ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯದಿಂದ ವಾಪಸ್ ಪಡೆದಿದ್ದರು ಎಂದೂ ತಿಳಿಸಲಾಗಿತ್ತು.
ಸರಳವಾಗಿ ಅರ್ಜಿಯನ್ನು ವಾಪಸ್ ಪಡೆದುಕೊಳ್ಳುವುದನ್ನು ಅದೇ ದೂರಿನೊಂದಿಗೆ ಇತರ ನ್ಯಾಯಾಲಯವನ್ನು ಸಂಪರ್ಕಿಸುವ ಸ್ವಾತಂತ್ರದೊಂದಿಗೆ ಅರ್ಜಿಯನ್ನು ವಾಪಸ್ ಪಡೆದುಕೊಳ್ಳುವುದರಿಂದ ಪ್ರತ್ಯೇಕಿಸಬೇಕು ಎಂದು ಹೇಳಿದ ಉಚ್ಚ ನ್ಯಾಯಾಲಯವು,ಈ ವಿಷಯದಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ಅರ್ಜಿದಾರರಿಗೆ ನಿರ್ದೇಶ ನೀಡಿತು.
ತಾನು ಪ್ರಕರಣದಲ್ಲಿ ಕಕ್ಷಿಯಾಗಿ ಸೇರಿಕೊಂಡಿದ್ದೆ ಮತ್ತು ಇದೇ ವಿಷಯದಲ್ಲಿ ಉಪಾಧ್ಯಾಯರ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ ಎಂದು ಅಖಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಪರ ವಕೀಲ ಎಂ.ಆರ್.ಶಂಶಾದ್ ನ್ಯಾಯಾಲಯಕ್ಕೆ ತಿಳಿಸಿದರು.
ಅವರು (ಉಪಾಧ್ಯಾಯ) ಸರ್ವೋಚ್ಚ ನ್ಯಾಯಾಲಯದಲ್ಲಿ ನಾಲ್ಕು ಅರ್ಜಿಗಳನ್ನು ಸಲ್ಲಿಸಿದ್ದು,ಅವು ವಜಾಗೊಂಡಿವೆ. ಇದು ಅವರ ಎರಡನೇ ಸುತ್ತು ಆಗಿದೆ ಎಂದರು.
ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಗಳು ಮುಸ್ಲಿಮ್ ಕಾನೂನಿನಡಿ ತಲಾಕ್ಗೆ ಸಂಬಂಧಿಸಿದ್ದವು ಮತ್ತು ತಾನು ಕಾನೂನು ಆಯೋಗದ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಎಂದು ಉಪಾಧ್ಯಾಯ ಹೇಳಿದರು.
ಮೇ 2019ರಲ್ಲಿ ಉಚ್ಚ ನ್ಯಾಯಾಲಯವು,ರಾಷ್ಟ್ರೀಯ ಸಮಗ್ರತೆ,ಲಿಂಗ ನ್ಯಾಯ ಮತ್ತು ಸಮಾನತೆ,ಮಹಿಳೆಯರ ಘನತೆಯನ್ನು ಉತ್ತೇಜಿಸಲು ಯುಸಿಸಿಯ ಕರಡು ರಚನೆಗಾಗಿ ನ್ಯಾಯಾಂಗ ಆಯೋಗವೊಂದನ್ನು ರಚಿಸುವಂತೆ ಕೋರಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು.
ವಿವಿಧ ಧರ್ಮಗಳು ಮತ್ತು ಪಂಗಡಗಳ ನಾಗರಿಕರು ವಿಭಿನ್ನ ಆಸ್ತಿ ಮತ್ತು ವೈವಾಹಿಕ ಕಾನೂನುಗಳನ್ನು ಅನುಸರಿಸುತ್ತಿರುವುದು ದೇಶದ ಏಕತೆಗೆ ಪೂರಕವಲ್ಲ ಮತ್ತು ಯುಸಿಜಿಯು ಭಾರತದ ಸಮಗ್ರತೆಗೆ ಕಾರಣವಾಗುತ್ತದೆ ಎಂದು ಕೇಂದ್ರವು ತನ್ನ ಉತ್ತರದಲ್ಲಿ ತಿಳಿಸಿತ್ತು. ಉಪಾಧ್ಯಾಯರ ಅರ್ಜಿಯಲ್ಲದೆ,ಭಾರತಕ್ಕೆ ಯುಸಿಸಿಯ ತುರ್ತು ಅಗತ್ಯವಿದೆ ಎಂದು ವಾದಿಸಿ ಇತರ ನಾಲ್ಕು ಅರ್ಜಿಗಳೂ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿವೆ.







