ಡಬಲ್ ಇಂಜಿನ್ ಸರಕಾರದ ಬೋಗಿಗಳು ಮಾತ್ರ ರಾಜ್ಯದಲ್ಲಿವೆ: ಕಾಂಗ್ರೆಸ್ ಟೀಕೆ

ಬೆಂಗಳೂರು, ಎ.25: ಬಿಜೆಪಿಯವರ ಮಾತೆತ್ತಿದರೆ ಡಬಲ್ ಇಂಜಿನ್ ಸರಕಾರ ಎಂದು ಹೇಳುತ್ತಾರೆ. ಆದರೆ ಡಬಲ್ ಇಂಜಿನ್ ಸರಕಾರದ ಎರಡೂ ಇಂಜಿನ್‍ಗಳು ದಿಲ್ಲಿಯಲ್ಲಿದ್ದು, ರಾಜ್ಯದಲ್ಲಿ ಕೇವಲ ಬೋಗಿಗಳು ಮಾತ್ರ ಇವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಆರ್. ರಮೇಶ್ ಟೀಕಿಸಿದ್ದಾರೆ.
ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರಕಾರದ ಬೋಗಿಗಳು ಕೇವಲ ರಾಜ್ಯದ ಸಂಪತ್ತನ್ನು ರವಾನಿಸಲಷ್ಟೇ ಬಳಸಿಕೊಳ್ಳಲಾಗುತ್ತಿದ್ದು, ರಾಜ್ಯ ಸರಕಾರದ ಎಲ್ಲಾ ಕೆಲಸಗಳನ್ನು ಕೇಂದ್ರವೇ ಪರೋಕ್ಷವಾಗಿ ನಿಯಂತ್ರಿಸಲಾಗುತ್ತಿದೆ ಎಂದರು.
ಕೇಂದ್ರ ಸರಕಾರ ಹಾಗೂ ನಾಯಕರು ರಾಜ್ಯ ಸರಕಾರವನ್ನು ಹಗುರವಾಗಿ ಪರಿಗಣಿಸಿದ್ದಾರೆ. ಹಿಂದಿ ದಿವಸ ಆಚರಣೆ ಮೂಲಕ ಕನ್ನಡ ಭಾಷೆಗೆ ಆದ್ಯತೆ ನೀಡದೆ ಹಿಂದೆ ಹೇರಿಕೆ ಮಾಡಲಾಗುತ್ತಿದೆ. ಶಾಸ್ತ್ರೀಯ ಭಾಷೆಗಳಿಗೆ ಹಣ ನೀಡುವ ವಿಚಾರವಾಗಿ ವಿಧಾನ ಪರಿಷತ್‍ನಲ್ಲಿ ಪ್ರಸ್ತಾಪ ಮಾಡಿದಾಗ, ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಒತ್ತಡ ಹಾಕುತ್ತಿದ್ದೇವೆ ಎಂದು ಉತ್ತರ ನೀಡಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಿ.ಆರ್. ರಮೇಶ್ ತಿಳಿಸಿದರು.
ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ನೇಮಕಾತಿ ಪರೀಕ್ಷೆಗಳಲ್ಲಿ ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ನೆರೆಯ ರಾಜ್ಯಗಳಲ್ಲಿ ಕೇಂದ್ರ ಸರಕಾರದ ನಿಲುವು ಬಗ್ಗೆ ಪ್ರತಿಭಟಿಸಿ ಸ್ಥಳೀಯ ಭಾಷೆಗೆ ಆದ್ಯತೆ ಪಡೆದಿದ್ದಾರೆ. ಆದರೆ ಇಲ್ಲಿನ ರಾಜ್ಯ ಸರಕಾರ ಹಾಗೂ ನಾಯಕರು ಕೇಂದ್ರಕ್ಕೆ ರಾಜಕೀಯ ಒತ್ತಡ ಹೇರದೆ ಕೇಂದ್ರದ ಕೈಗೊಂಬೆಯಾಗಿ ಅವರ ಕ್ರಮಗಳಿಗೆ ತಲೆಯಾಡಿಸುತ್ತಿದ್ದಾರೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಪಿ.ಆರ್. ರಮೇಶ್ ಹೇಳಿದರು.
ಈ ಮಹದಾಯಿ ನೀರಿನ ಹಂಚಿಕೆ ವಿಚಾರದಲ್ಲೂ ಕೇಂದ್ರ ಹಾಗೂ ರಾಜ್ಯ ಸರಕಾರ ಕನ್ನಡಿಗರ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡಿಲ್ಲ. ಅಲ್ಲದೆ, ರಾಜ್ಯಕ್ಕೆ ಗುಜರಾತಿನ ಅಮೂಲ್ ಸಂಸ್ಥೆ ಪ್ರವೇಶಿಸುವ ಮೂಲಕ ಸ್ಥಳೀಯ ಮಟ್ಟದ ಸಹಕಾರ ಸಂಘಗಳನ್ನು ನಾಶ ಮಾಡುವ ಹುನ್ನಾರ ನಡೆದಿದೆ. ಆ ಮೂಲಕ ಕೇಂದ್ರ ನಿಯಂತ್ರಣ ಸಾಧಿಸಲು ಮುಂದಾಗಿದೆ ಎಂದು ಪಿ.ಆರ್. ರಮೇಶ್ ಟೀಕಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ರಾಮಚಂದ್ರಪ್ಪ ಮಾತನಾಡಿ, ದೇಶ ಹಾಗೂ ರಾಜ್ಯದಲ್ಲಿ ಸಂಸತ್ತು, ವಿಧಾನಸೌಧ, ಜಿಲ್ಲಾ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಸೇರಿ ನಾಲ್ಕು ಹಂತಗಳ ವ್ಯವಸ್ಥೆಗಳಿವೆ. ಈ ಎಲ್ಲಾ ವ್ಯವಸ್ಥೆಗಳು ಇಂದು ಕುಸಿದಿವೆ. ಸಂಸತ್ ಹಾಗೂ ವಿಧಾನ ಮಂಡಲಗಳು ನಡೆಯುತ್ತಿದ್ದು, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಸೇರಿದಂತೆ ನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿಲ್ಲ ಎಂದರು.
ಬೆಂಗಳೂರು ದೇಶಕ್ಕೆ ದೊಡ್ಡ ಮಟ್ಟದ ಆರ್ಥಿಕ ಶಕ್ತಿ ತುಂಬುತ್ತಿದ್ದು, ಈಗ ಆಡಳಿತ ಮುಖ್ಯಸ್ಥರೇ ಇಲ್ಲವಾಗಿದೆ. ಉಸ್ತುವಾರಿ ಮಂತ್ರಿಗಳು, ಮೇಯರ್‍ಗಳಿಲ್ಲ. ಎಲ್ಲಾ ಅಧಿಕಾರಿಗಳೇ ಈ ಸ್ಥಾನವನ್ನು ತುಂಬುತ್ತಿದ್ದಾರೆ. ಈ ವ್ಯವಸ್ಥೆಯ ಭಾಗವಾಗಬೇಕಿದ್ದ, ಕಾರ್ಪೊರೇಟರ್, ಜಿಲ್ಲಾ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ಕಾರ್ಯಗಳೇ ಕಸಿದಿದೆ. ಇದು ಇಡೀ ರಾಜ್ಯದ ಜನರಿಗೆ ಆಗುತ್ತಿರುವ ಮೋಸ ಎಂದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲಿದೆ ಎಂದು ಎಂ. ರಾಮಚಂದ್ರಪ್ಪ ಭರವಸೆ ನೀಡಿದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಮಾತನಾಡಿ, 30 ವರ್ಷಗಳಿಂದ ರಾಜ್ಯದಲ್ಲಿ ಮುಸಲ್ಮಾನ ಸಮುದಾಯಕ್ಕೆ ಮೀಸಲಾತಿಯನ್ನು ನೀಡಲಾಗಿತ್ತು. ಈ ರಾಜ್ಯ ಸರಕಾರ ಅದನ್ನು ಕಸಿದುಕೊಂಡಿದ್ದು, ಈ ವಿಚಾರವಾಗಿ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ರಾಜಕೀಯಕ್ಕಾಗಿ, ಚುನಾವಣಾ ಗಿಮಿಕ್‍ಗಾಗಿ ಸರಕಾರ ಈ ಮೀಸಲಾತಿ ಹೆಚ್ಚಳದ ಆದೇಶ ಹೊರಡಿಸಿದೆ. ಇದೆಲ್ಲವೂ ಜನರನ್ನು ಹಾದಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಜೋಷಿ ಅವರು ಶೆಟ್ಟರ್ ಅವರ ಮನವೊಲಿಸಲು ಅವರ ಮನೆಗೆ ಹೋದಾಗ, ಬಿಜೆಪಿ ಬಿಟ್ಟರೆ ಇಡಿ, ಐಟಿ, ಸಿಬಿಐ ತನಿಖೆ ಎದುರಿಸುವ ಬೆದರಿಕೆ ಹಾಕಿದ್ದರು. ಶೆಟ್ಟರ್ ಅವರು ಇದಕ್ಕೆ ಹೆದರದೇ, ತಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿಯವರು ಶೆಟ್ಟರ್ ಹಾಗೂ ಸವದಿ ಅವರನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂದು ರಾಜ್ಯದ ಜನ ನೋಡಿದ್ದಾರೆ. ಯಡಿಯೂರಪ್ಪ ಅವರು ಕಣ್ಣಲ್ಲಿ ನೀರು ಹಾಕಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾಕೆ ರಾಜೀನಾಮೆ ನೀಡಿದರು ಎಂದು ರಮೇಶ್ ಬಾಬು ಪ್ರಶ್ನಿಸಿದರು.