2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ: ಬೈಡನ್ ಘೋಷಣೆ

ವಾಶಿಂಗ್ಟನ್,ಎ.25: 2024ರ ಅಧ್ಯಕ್ಷೀಯ ಚುನಾವಣೆಗೆ ತನ್ನ ಸ್ಪರ್ಧೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಅಧಿಕೃತವಾಗಿ ಘೋಷಿಸಿದ್ದಾರೆ. ತಾನು ಅಮೆರಿಕ ಅಧ್ಯಕ್ಷನಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಆರಂಭಿಸಿದ ಕೆಲಸವನ್ನು ಪೂರ್ಣಗೊಳಿಸಲು ತನಗೆ ಹೆಚ್ಚು ಕಾಲಾವಕಾಶ ನೀಡಬೇಕೆಂದು ಅವರು ಅಮೆರಿಕದ ಮತದಾರರಿಗೆ ಮನವಿ ಮಾಡಿದ್ದಾರೆ. ಇದರೊಂದಿಗೆ ಬೈಡನ್ ಮುಂದಿನ ಚುನಾವಣೆಯಲ್ಲಿ ತಾನು ಸ್ಪರ್ಧಿಸುವ ಬಗ್ಗೆ ಉಂಟಾಗಿದ್ದ ಊಹಾಪೋಹಗಳಿಗೆ ತೆರೆಯೆಳೆದಿದ್ದಾರೆ. 81 ವರ್ಷ ವಯಸ್ಸಿನ ಬೈಡನ್ ಅವರು ಅಮೆರಿಕ ಈವರೆಗೆ ಕಂಡಿರುವ ಅತ್ಯಂತ ಹಿರಿಯ ವಯಸ್ಸಿನ ಅಧ್ಯಕ್ಷರಾಗಿದ್ದಾರೆ.
ಬೈಡನ್ ಅವರು 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದಲ್ಲಿ ಎರಡನೆ ಅವಧಿಯ ಅಂತ್ಯದ ವೇಳೆಗೆ ಅವರಿಗೆ 86 ವರ್ಷಗಳಾಗಲಿದೆ. ರಾಜಕೀಯದಲ್ಲಿ 50ಕ್ಕೂ ಅಧಿಕ ವರ್ಷಗಳ ಅನುಭವ ಹೊಂದಿರುವ ಬೈಡನ್ ಅವರ ವಯಸ್ಸಿನ ಬಗ್ಗೆ ವ್ಯಾಪಕ ಆತಂಕಗಳುಂಟಾಗಿದ್ದವು. ಸೋಮವಾರ ಫ್ರೀಡಂ (ಸ್ವಾತಂತ್ರ) ಎಂಬ ಪದದೊಂದಿಗೆ ಆರಂಭಗೊಳ್ಳುವ ಮೂರು ನಿಮಿಷಗಳ ಪ್ರಚಾರ ವಿಡಿಯೋದಲ್ಲಿ ಬೈಡನ್ ಅವರು ಮುಂದಿನ ಅಧ್ಯಕ್ಷೀಯ ಚುನಾವಣೆಗೆ ತನ್ನ ಸ್ಪರ್ಧೆಯನ್ನು ಪ್ರಕಟಿಸಿದ್ದಾರೆ.
2024ರ ಚುನಾವಣೆಯಲ್ಲಿ ಗರ್ಭಪಾತದ ಹಕ್ಕುಗಳು, ಪ್ರಜಾಪ್ರಭುತ್ವದ ರಕ್ಷಣೆ, ಮತದಾನದ ಹಕ್ಕುಗಳು ಹಾಗೂ ಸಾಮಾಜಿಕ ಸುರಕ್ಷತೆ ಇವು ಅತ್ಯಂತ ಮಹತ್ವದ ವಿಷಯಗಳಾಗಿ ಇರುವುದಿಲ್ಲವೆಂದು ಬೈಡೆನ್ ಪ್ರತಿಪಾದಿಸಿದ್ದಾರೆ.
‘‘ಪ್ರತಿಯೊಂದು ತಲೆಮಾರಿನ ಅಮೆರಿಕನ್ನರು, ಪ್ರಜಾಪ್ರಭುತ್ವವನ್ನು ರಕ್ಷಣೆಗೆ, ವೈಯಕ್ತಿಕ ಸ್ವಾತಂತ್ರ, ಮತದಾನದ ಹಕ್ಕು ಹಾಗೂ ನಾಗರಿಕ ಹಕ್ಕಿಗಾಗಿ ಎದ್ದುನಿಲ್ಲಬೇಕಾದಂತಹ ಸಂದರ್ಭವನ್ನು ಎದುರಿಸಿದ್ದಾರೆ’’ ಎಂದು ಬೈಡೆನ್ ಹೇಳಿದರು.
2024ರ ಅಧ್ಯಕ್ಷೀಯ ಚುನಾವಣೆಯು ರಿಪಬ್ಲಿಕನ್ ಪಕ್ಷದ ತೀವ್ರವಾದದ ವಿರುದ್ದದ ಹೋರಾಟವಾಗಿದೆ ಎಂದು ಹೇಳಿದ ಅವರು ದೇಶದ ಸ್ವರೂಪವನ್ನು ಪುನರ್ಸ್ಥಾಪಿಸುವ ತನ್ನ ಪ್ರತಿಜ್ಞೆಯನ್ನು ಸಂಪೂರ್ಣವಾಗಿ ಸಾಕ್ಷಾತ್ಕರಿಸಲು ಬೈಡೆನ್ ಅವರಿಗೆ ಅಧಿಕ ಸಮಯದ ಅಗತ್ಯವಿದೆ ಎಂದರು.
‘‘ನಾಲ್ಕು ವರ್ಷಗಳ ಹಿಂದೆ ನಾನು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದಾಗ, ಅಮೆರಿಕದ ಅಂತಾರಾತ್ಮದ ಉಳಿವಿಗಾಗಿ‘‘ ನಾವು ಹೋರಾಡುತ್ತಿದ್ದೇವೆ ಎಂದು ಹೇಳಿದ್ದೆ. ಈಗಲೂ ನಾವು ಅದಕ್ಕಾಗಿ ಹೋರಾಡುತ್ತಿದ್ದೇವೆ ಎಂದರು.
ಸರಕಾರಿ ವಿರೋಧಿ ಬಂಡಾಯ ಹಾಗೂ ಗರ್ಭಪಾತ ಪರ ಹೋರಾಟಗಾರರು ಅಮೆರಿಕದ ಸುಪ್ರೀಂಕೋರ್ಟ್ ಮುಂದೆ ಪ್ರತಿಭಟನೆ ನಡೆಸಿದ ಘಟನೆಗಳನ್ನು ಪ್ರಸ್ತಾವಿಸಿದ ಅವರು, ಮುಂದಿನ ವರ್ಷಗಳಲ್ಲಿ ನಮಗೆ ಹೆಚ್ಚು ಸ್ವಾತಂತ್ರ ದೊರೆಯುವುದೇ ಅಥವಾ ಕಡಿಮೆ ಸ್ವಾತಂತ್ರವಿರುವುದೇ ಎಂಬುದು ನಾವು ಈಗ ಎದುರಿಸುತ್ತಿರುವ ಪ್ರಶ್ನೆಯಾಗಿದೆ. ‘‘ಆದರೆ ಈಗ ತೃಪ್ತಿಪಟ್ಟುಕೊಳ್ಳುವ ಸಮಯವಲ್ಲ. ಈ ಕಾರಣಕ್ಕಾಗಿ ನಾನು ಮರುಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದವರು ಹೇಳಿದರು.