ಇಂಡೊನೇಶ್ಯದಲ್ಲಿ ಪ್ರಬಲ ಭೂಕಂಪ: ಸುನಾಮಿ ಭೀತಿಯಿಂದ ಎತ್ತರಪ್ರದೇಶಗಳಿಗೆ ನಾಗರಿಕರ ಪಲಾಯನ

ಜಕಾರ್ತ,ಎ.25: ಪೂರ್ವ ಇಂಡೊನೇಶ್ಯದಲ್ಲಿ ಮಂಗಳವಾರ ಸಮುದ್ರದಾಳದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಸುನಾಮಿ ಭೀತಿಯಿಂದ ತೀರ ಪ್ರದೇಶಗಳ ಸಾವಿರಾರು ಜನರು ಎತ್ತರ ಪ್ರದೇಶಗಳಿಗೆ ಪಲಾಯನಗೈದಿರುವುದಾಗಿ ವರದಿಯಾಗಿದೆ.
ಬಿರುಮಳೆ ಹಾಗೂ ನುಸುಕಿನ ಮಬ್ಬುಗತ್ತಲೆಯ ನಡುವೆ ಮೆಂಟಾವಾಯಿ ದ್ವೀಪದ ಗ್ರಾಮವೊಂದರ ನೂರಾರು ನಿವಾಸಿಗಳು ಕಾಲ್ನಡಿಗೆಯಲ್ಲಿ ಹಾಗೂ ಮೋಟಾರ್ ಸೈಕಲ್ ಗಳಲ್ಲಿ ಎತ್ತರದ ಸ್ಥಳಗಳಿಗೆ ತೆರಳುತ್ತಿರುವ ದೃಶ್ಯಗಳನ್ನು ರಾಷ್ಟ್ರೀಯ ವಿಕೋಪ ಪರಿಹಾರ ಏಜೆನ್ಸಿ ಶನಿವಾರ ಬಿಡುಗಡೆ ಮಾಡಿದೆ. ಗ್ರಾಮದ ಆಸ್ಪತ್ರೆಯಲ್ಲಿ ಬಿರುಕುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿದ್ದ ರೋಗಿಗಳನ್ನು ತೆರವುಗೊಳಿಸಲಾಗಿದೆಯೆಂದು ವರದಿಗಳು ಹೇಳಿವೆ.
ಪಶ್ಚಿಮ ಸುಮಾತ್ರ ಹಾಗೂ ಉತ್ತರ ಸುಮಾತ್ರ ಪ್ರಾಂತಗಳಲ್ಲಿ ಹಲವು ಜಿಲ್ಲೆಗಳು ಹಾಗೂ ನಗರಗಳಲ್ಲಿ ಭೂಕಂಪನದ ಅನುಭವವಾಗಿದೆ ಹಾಗೂ ಸಮುದ್ರ ತೀ ಪ್ರದೇಶದ ನಿವಾಸಿಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಪ್ರಾಂತೀಯ ರಾಜಧಾನಿ ಪಡಾಂಗ್ ಸೇರಿದಂತೆ ಪಶ್ಚಿಮ ಸುಮಾತ್ರ ಪ್ರಾಂತದ ಹಲವು ಭಾಗಗಳ ನಿವಾಸಿಗಳಿಗೆ ಸುಮಾರು 30 ಸೆಕೆಂಡುಗಳ ಕಾಲ ಬಲವಾದ ಭೂಕಂಪನದ ಅನುಭವವಾಗಿದೆಯೆಂದು ಏಜೆನ್ಸಿಯ ವಕ್ತಾರ ಅಬ್ದುಲ್ ಮುಹಾರಿ ತಿಳಿಸಿದ್ದಾರೆ.
ಪಶ್ಚಾತ್ಕಂಪನದ ಭೀತಿಯ ಕಾರಣದಿಂದಾಗಿ ಘೋಷಿಸಲಾಗಿದ್ದ ಸುನಾಮಿ ಮುನ್ನೆಚ್ಚರಿಕೆಯನ್ನು ಹಿಂಪಡೆದ ಆನಂತರವೂ ಮೆಂಟಾವಾಯಿ ದ್ವೀಪದ ಹಲವಾರು ಗ್ರಾಮಗಳ ನಿವಾಸಿಗಳು ಎತ್ತರದ ಪ್ರದೇಶಗಳಲ್ಲಿ ಉಳಿದುಕೊಂಡಿದ್ದಾರೆ ಎಂದವರು ಹೇಳಿದ್ದಾರೆ. ಭೂಕಂಪದಿಂದ ಆಗಿರುವ ಹಾನಿಯ ಪ್ರಮಾಣವನ್ನು ಅಂದಾಜಿಸುತ್ತಿದ್ದಾರೆಂದು ಅವರು ತಿಳಿಸಿದ್ದಾರೆ.
ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.1ರಷ್ಟು ದಾಖಲಾಗಿದ್ದು, ಅದರ ಕೇಂದ್ರ ಬಿಂದು ಉತ್ತರ ಸುಮಾತ್ರದ ಕರಾವಳಿ ಪಟ್ಟ ತೆಲುಕ್ ದಲಲಾಮ್ ಪೂರ್ವದಿಂದ 170 ಕಿ.ಮೀ. ದೂರದ ಸಮುದ್ರದಲ್ಲಿ ಕೇಂದ್ರೀಕೃತವಾಗಿತ್ತು ಎಂದು ವರದಿಗಳು ತಿಳಿಸಿವೆ.







