ಸಲಿಂಗ ವಿವಾಹ: ಸುಪ್ರೀಂ ವಿಚಾರಣೆ ವಿರುದ್ಧ ವಿಎಚ್‌ಪಿ ವಕೀಲರ ಸಂಘಟನೆಯಿಂದ ನಿರ್ಣಯ ಅಂಗೀಕಾರ

ಹೊಸದಿಲ್ಲಿ, ಎ. 25: ಭಾರತದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಗಳ ಗುಚ್ಛವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ವಿರುದ್ಧ ವಿಶ್ವಹಿಂದೂ ಪರಿಷತ್‌ನ ಕಾನೂನು ಘಟಕ ಹಾಗೂ ದಿಲ್ಲಿಯ ಆಲ್ ಡಿಸ್ಟ್ರಿಕ್ಟ್ ಕೋರ್ಟ್ಸ್ ಬಾರ್ ಅಸೋಸಿಯೇಶನ್‌ನ ಸಮನ್ವಯ ಸಮಿತಿ ಸೋಮವಾರ ಪ್ರತ್ಯೇಕ ನಿರ್ಣಯ ಮಂಡಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ಎಪ್ರಿಲ್ 18ರಿಂದ ಈ ಪ್ರಕರಣದ ವಿಚಾರಣೆ ನಡೆಸಲಿದೆ. ಜೈವಿಕ ಹೆಣ್ಣು ಹಾಗೂ ಗಂಡಿಗೆ ಮಾತ್ರ ಅನ್ವಯಿಸುವ ವಿಶೇಷ ವಿವಾಹ ಕಾಯ್ದೆ-1954ರಲ್ಲಿ ಹಕ್ಕು ರೂಪಿಸುವಂತೆ ಎಲ್‌ಜಿಬಿಟಿಕ್ಯುಐಎ ಪ್ಲಸ್ ಸಮುದಾಯ ಕೋರಿದೆ ಎಂದು ವಿಶ್ವಹಿಂದೂ ಪರಿಷತ್‌ನ ಕಾನೂನು ಘಟಕ ಸೋಮವಾರ ತನ್ನ ನಿರ್ಣಯದಲ್ಲಿ ಹೇಳಿದೆ.
ಕಾನೂನಿನ ಯಾವುದೇ ನಿಯಮವನ್ನು ರದ್ದುಪಡಿಸುವ ಅಥವಾ ನಿರ್ದಿಷ್ಟ ನಿಯಮವನ್ನು ಸೇರಿಸುವ ಪ್ರಯತ್ನ ಕಾಯ್ದೆಯನ್ನು ಮರು ಬರೆಯುವ ಹಾಗೂ ಸಂಸತ್ತಿನಿಂದ ಶಾಸನ ರೂಪಿಸುವ ಅಧಿಕಾರವನ್ನು ವಶಪಡಿಸಿಕೊಳ್ಳುವುದಕ್ಕೆ ಸಮಾನವಾಗಿರುತ್ತದೆ ಎಂದು ವಿಶ್ವಹಿಂದೂ ಪರಿಷತ್ ಹೇಳಿದೆ.





