ಮಂಗಳನ ಚಂದಿರನ ಛಾಯಾಚಿತ್ರ ತೆಗೆದ ಯುಎಇನ ಆಮಲ್ ಬಾಹ್ಯಾಕಾಶ ನೌಕೆ

ರಿಯಾದ್,ಎ.25: ಮಂಗಳಗ್ರಹದ ಕಕ್ಷೆಗೆ ಯುಎಇ(ಸಂಯುಕ್ತ ಅರಬ್ ಸಂಸ್ಥಾನ) ಉಡಾವಣೆಗೊಳಿಸಿರುವ ಬಾಹ್ಯಾಕಾಶ ನೌಕೆ ‘ಅಮಲ್’ ಆ ಗ್ರಹದ ಪುಟ್ಟ ಚಂದ್ರ ‘ಡೈಮೊಸ್’ನ ಅಪೂರ್ವ ಛಾಯಾಚಿತ್ರಗಳನ್ನು ಸೋಮವಾರ ಸೆರೆಹಿಡಿದಿದೆ. ಅಮಲ್ ಬಾಹ್ಯಾಕಾಶ ನೌಕೆಯು ಮಾರ್ಚ್ 10ರಂದು ಡೈಮೊಸ್ ಉಪಗ್ರಹದಿಂದ ಕೇವಲ 100 ಕಿ.ಮೀ. ದೂರದಲ್ಲಿ ಹಾದುಹೋದ ಸಂದರ್ಭ ಈ ಛಾಯಾಚಿತ್ರವನ್ನು ತೆಗೆದಿದೆ. ಕಳೆದ 46 ವರ್ಷಗಳಲ್ಲಿ ಡೈಮೊಸ್ನನ್ನು ಅತ್ಯಂತ ಸನಿಹದಲ್ಲಿ ಹಾದುಹೋದ ಬಾಹ್ಯಾಕಾಶ ನೌಕೆಯೆಂಬ ಖ್ಯಾತಿಗೂ ಅಮಲ್ ಪಾತ್ರವಾಗಿದೆ.
ಅಲ್ಲದೆ ಡೈಮೊಸ್ ನ ಹೆಚ್ಚೇನೂ ಅನ್ವೇಷಿಸಿರದ ಭಾಗದ ಬಗ್ಗೆಯೂ ಅಮಲ್ ವೀಕ್ಷಣೆ ನಡೆಸಿದೆ. ಡೈಮೊಸ್ಗಿಂತ ಮಂಗಳನ ಇನ್ನೊಂದು ಚಂದಿರನಾದ ಫೋಬೊಸ್ ಎರಡು ಪಟ್ಟು ದೊಡ್ಡದಿದೆ. ಅದು ಮಂಗಳ ಗ್ರಹದಿಂದ ಕೇವಲ 6 ಸಾವಿರ ಕಿ.ಮೀ. ದೂರದಲ್ಲಿ ಪರಿಭ್ರಮಣೆ ನಡೆಸುತ್ತಿದೆ.
ಡೈಮೊಸ್ ಕ್ಷುದ್ರಗ್ರಹವೆಂಬ ಈವರೆಗಿನ ಸಿದ್ಧಾಂತವನ್ನು ನೂತನ ಛಾಯಾಚಿತ್ರಗಳು ತಳ್ಳಿಹಾಕಿವೆಯೆಂದು ಯುಎಇ ಬಾಹ್ಯಾಕಾಶ ಏಜೆನ್ಸಿಯ ಅಲ್ ಮಾತ್ರ್ಶಿ ಹಾಗೂ ಇತರ ವಿಜ್ಞಾನಿಗಳು ತಿಳಿಸಿದ್ದಾರೆ.
ಅಮಲ್ ಬಾಹ್ಯಾಕಾಶ ನೌಕೆಯನ್ನು 2020ರ ಜುಲೈ 19ರಂದು ಮಂಗಳಗ್ರಹದ ಕಕ್ಷೆಗೆ ಉಡಾವಣೆಗೊಳಿಸಲಾಗಿತ್ತು. 1977ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಉಡಾವಣೆಗೊಳಿಸಿದ್ದ ವೈಕಿಂಗ್ 2 ನೌಕೆಯು ಡೈಮೊಸ್ನಿಂದ 30 ಕಿ.ಮೀ. ದೂರದಲ್ಲಿ ಹಾದುಹೋಗಿತ್ತು. ತರುವಾಯ ಉಡಾವಣೆಗೊಳಿಸಲ್ಪಟ್ಟ ಎಲ್ಲಾ ಬಾಹ್ಯಾಕಾಶ ನೌಕೆಗಳು ಡೈಮೊಸ್ನ ಛಾಯಾಚಿತ್ರವನ್ನು ಅನತಿ ದೂರದಿಂದಲೇ ತೆಗೆದಿದ್ದವು.