ಪತ್ರಕರ್ತರ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಬಿಜೆಪಿ ಶಾಸಕ ಅಶೋಕ್ ನಾಯ್ಕ್
ಬಂಜಾರ-ಭೋವಿ ಸಮಾಜದ ವಿರುದ್ದ ವಿವಾದ್ಮಾತಕ ಹೇಳಿಕೆ

ಶಿವಮೊಗ್ಗ, ಎ.25: ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಶಾಸಕ,ಬಿಜೆಪಿ ಅಭ್ಯರ್ಥಿ ಕೆ.ಬಿ ಆಶೋಕ್ ನಾಯ್ಕ್ ಅವರು ಪತ್ರಕರ್ತರ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗಿ ಉತ್ತರ ನೀಡಲು ತಡವರಿಸಿದರು.
ನಗರದ ಕುವೆಂಪು ರಸ್ತೆಯಲ್ಲಿರುವ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಕಚೇರಿಯಲ್ಲಿ ಶಾಸಕ ಕೆ.ಬಿ ಆಶೋಕ್ ನಾಯ್ಕ್ ಪತ್ರಿಕಾಗೋಷ್ಟಿ ಹಮ್ಮಿಕೊಂಡಿದ್ದರು.
ಪತ್ರಿಕಾಗೋಷ್ಟಿಯಲ್ಲಿ ಹೊಳಲೂರು-ಬೂದಿಗೆರೆ ಏತ ನೀರಾವರಿ ಯೋಜನೆ ಕಾಮಗಾರಿ, ಒಳಮೀಸಲಾತಿ ವಿರೋಧಿಸಿ ಬಂಜಾರ ಸಮುದಾಯದ ಹೋರಾಟ,ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿ ಹಕ್ಕಿನ ಒಡೆತನ ಮತ್ತು ವಿಮಾನ ನಿಲ್ದಾಣಕ್ಕೆ ಜಮೀನು ಕೊಟ್ಟ ರೈತರಿಗಾದ ಅನ್ಯಾಯದ ಬಗ್ಗೆ ಪತ್ರಕರ್ತರು ಸಾಲು ಸಾಲು ಪ್ರಶ್ನೆ ಕೇಳಿದರು.
ಪತ್ರಕರ್ತರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡುವಲ್ಲಿ ಶಾಸಕರು ವಿಫಲರಾದರು.ವಿಮಾನ ನಿಲ್ದಾಣಕ್ಕೆ ಜಾಗ ಕೊಟ್ಟ ರೈತರಿಗೆ ನಿವೇಶನ ಕೊಡುವ ಭರವಸೆ ನೀಡಲಾಗಿತ್ತು.ರೈತರಿಗೆ ನಿವೇಶನ ಕೊಡಲು ಕರ್ನಾಟಕ ಗೃಹಮಂಡಳಿಗೆ ಹಣವನ್ನು ಜಮೆ ಮಾಡಲಾಗಿದೆ.ಜಿಲ್ಲಾಧಿಕಾರಿಗಳು ನಿವೇಶನ ಹಸ್ತಾಂತರ ಮಾಡಲು ಕ್ರಮ ಕೈಗೊಂಡಿದ್ದಾರೆ.ಆದರೆ ರೈತರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ತಡವಾಗಿದೆ ಎಂದು ಶಾಸಕರು ತಿಳಿಸಿದರು.
ಇದಕ್ಕೆ ಪ್ರಶ್ನಿಸಿದ ಪತ್ರಕರ್ತರು, ವಿಮಾನ ನಿಲ್ದಾಣ ಮಾಡಿಸಿದ್ದು ಆಶೋಕ್ ನಾಯ್ಕ್ ರವರ ಅಥವಾ ಯಡಿಯೂರಪ್ಪ ನವರ ಎಂದು ಕೇಳಿದರು.ಇದಕ್ಕೆ ಉತ್ತರ ನೀಡಿದ ಅವರು, ಯಡಿಯೂರಪ್ಪನವರು.ಇದರಲ್ಲಿ ಎರಡು ಮಾತಿಲ್ಲ.ಆದರೆ ಜಾಗದ ಮೇಲೆ ಅಧಿಕಾರಿಗಳು ಕಮರ್ಷಿಯಲ್ ಆಗಿ ಯೋಚನೆ ಮಾಡಿದ್ದರು. ಇದರಿಂದ ಸಮಸ್ಯೆಯಾಗಿದೆ ಎಂದರು.
ಬಂಜಾರರು ಪ್ರಜ್ಞಾವಂತರಲ್ಲ:
ಒಳಮೀಸಲಾತಿ ವಿಚಾರವಾಗಿ ಹೋರಾಟದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ಶಿಫಾರಸ್ಸು ಮಾಡಿರುವುದನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವವರು ಪ್ರಜ್ಞಾವಂತರಲ್ಲ ಎನ್ನುವ ಮೂಲಕ ಬಂಜಾರ ಸಮುದಾಯ ಹಾಗೂ ಭೋವಿ ಸಮಾಜದ ವಿರುದ್ಧ ಅಶೋಕ್ ನಾಯ್ಕ ಅವರು ಹರಿಹಾಯ್ದರು.
ಒಳ ಮೀಸಲಾತಿ ಬಗ್ಗೆ ಜ್ಞಾನವಿಲ್ಲದೆ ಹೋರಾಟ ನಡೆಸುತ್ತಿದ್ದಾರೆ.ಹೀಗೆ ಹೋರಾಟ ನಡೆಸುತ್ತಿರುವವರು ಪ್ರಜ್ಞಾವಂತರಲ್ಲ ಎಂದ ಅವರು,ಒಳ ಮೀಸಲಾತಿ ಶಿಫಾರಸ್ಸಿಗೂ ಮುನ್ನ ಜಾತಿ ಗಣತಿ ಬಹಿರಂಗಪಡಿಸಬೇಕಿತ್ತು ಎಂಬ ಪ್ರಶ್ನೆಗೆ ಕಕ್ಕಾಬಿಕ್ಕಿಯಾದರು.
ತಮ್ಮನ್ನು ತಾನು ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ ತನ್ನ ಸಮುದಾಯಯವನ್ನೇ ಪ್ರಜ್ಞಾವಂತರಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ನ್ಯಾಯದ ಭರವಸೆ ಎಲ್ಲಿ ಹೋಯ್ತು:
ಶರಾವತಿ ಮುಳುಗಡೆ ರೈತರಿಗೆ ನ್ಯಾಯ ಒದಗಿಸಲು ಕೇಂದ್ರ ಸರ್ಕಾರದ ಅನುಮತಿಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಒಂದು ತಿಂಗಳಲ್ಲಿ ನಾಯ್ಯ ಒದಗಿಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದರು.ಯಾಕೆ ಸಮಸ್ಯೆ ಬಗೆಹರಿದಿಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದರು.ಇದಕ್ಕೆ ಪ್ರಶ್ನಿಸಿದ ಅವರು,ಈ ಹಿಂದೆ ಮಾಡಲಾಗಿದ್ದ ಡಿನೋಟಿಫಿಕೇಷನ್ ರದ್ದು ಮಾಡಲಾಗಿದೆ.ಜಿಲ್ಲೆಯಲ್ಲಿರುವ ಶರಾವತಿ ಮುಳುಗಡೆ ಸಂತ್ರಸ್ಥರ ಜಾಗವನ್ನು ಅಳತೆ ಮಾಡಿ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅನುಮತಿ ಪಡೆದು,ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಕೇಂದ್ರದ ಅನುಮತಿ ಪಡೆಯಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ.ಶೀಘ್ರದಲ್ಲೇ ನ್ಯಾಯ ಸಿಗುವ ಭರವಸೆ ಇದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಉತ್ತರಾಖಂಡ ರಾಜ್ಯದ ಬಿಜೆಪಿ ಉಪಾಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲಾ ಚುನಾವಣಾ ಉಸ್ತುವಾರಿ ಕುಲದೀಪ್ ಸಿಂಗ್ ,ಗ್ರಾಮಾಂತರ ಕ್ಷೇತ್ರದ ಪ್ರವಾಸಿ ಪ್ರಭಾರಿ ಉತ್ತರಾಖಂಡದ ಮಾಜಿ ಶಾಸಕ ಮುಖೇಶ್ ಕೂಲಿ, ಮುಖಂಡರಾದ ಎಸ್.ದತ್ತಾತ್ರಿ, ರತ್ನಾಕರ ಶೆಣೈ, ವಿರೂಪಾಕ್ಷಪ್ಪ, ಸಿಂಗನಹಳ್ಳಿ ಸುರೇಶ್ ಮತ್ತಿತರರಿದ್ದರು.







