ಯಶ್ಪಾಲ್ ಸುವರ್ಣ ಡಿಗ್ರಿ ಸರ್ಟಿಫಿಕೇಟ್ ಡಿಕೆಶಿಗೆ ಕೋರಿಯರ್ ಮಾಡುತ್ತೇವೆ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ, ಎ.26: ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಹೆಬ್ಬೆಟ್ಟು ಎಂಬುದಾಗಿ ಅವರ ಶಿಕ್ಷಣದ ಬಗ್ಗೆ ಟೀಕಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲು ಸರಿಯಾಗಿ ಮಾಹಿತಿ ಪಡೆದು ಮಾತನಾಡುವುದು ಒಳ್ಳೆಯದು. ಬೇಕಾದರೆ ಯಶ್ಪಾಲ್ ಸುವರ್ಣ ಅವರ ಡಿಗ್ರಿ ಸರ್ಟಿಫಿಕೇಟ್ ಡಿಕೆಶಿ ಅವರಿಗೆ ಕೋರಿಯರ್ ಮಾಡುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸೇರ್ಪಡೆಯಾಗಿರುವ ಜಿಪಂ ಮಾಜಿ ಸದಸ್ಯ ಬಾಬು ಹೆಗ್ಡೆ ಕಳೆದ ಬಾರಿ ಜಿಪಂ ಚುನಾವಣೆಯಲ್ಲಿ ಕೇವಲ 156 ಮತಗಳ ಅಂತರದಲ್ಲಿ ಗೆದ್ದಿರುವುದು. ಆದುದರಿಂದ ಅವರ ಶಕ್ತಿ ಏನು ಎಂಬುದು ನಮಗೆ ಗೊತ್ತಿದೆ. ಇವರು ಮತ್ತು ಇವರೊಂದಿಗೆ ಕಾಂಗ್ರೆಸ್ ಸೇರ್ಪಡೆಗೊಂಡವರು ಇನ್ನು 3-4 ದಿನಗಳಲ್ಲಿ ಪ್ರಾಯಶ್ಚಿಃತ ಪಡಲಿದ್ದಾರೆ. ಇವರಿಗೆ ಅಲ್ಲಿ ಯಾವುದೇ ಭವಿಷ್ಯ ಇಲ್ಲ. ಹಾಗಾಗಿ ಇವರು ತಮ್ಮ ನಿರ್ಧಾರದ ಬಗ್ಗೆ ಪುನರ್ ಪರಿಶೀಲನೆ ಮಾಡಲಿ ಎಂದರು.
ರಾಹುಲ್ ಗಾಂಧಿ ಉಡುಪಿ ಜಿಲ್ಲೆಗೆ ಆಗಮಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಹೋದ ಕಡೆಗಳಲ್ಲಿ ಕಾಂಗ್ರೆಸ್ ಸೋಲುತ್ತದೆ. ಹಾಗಾಗಿ ಅವರು ಉಡುಪಿಯಲ್ಲೂ ಕಾಂಗ್ರೆಸ್ ಸೋಲಿಸಲು ಬರುತ್ತಿದ್ದಾರೆ ಎಂದು ಟೀಕಿಸಿದರು. ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ಇನ್ನು 2-3 ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯಕ್ಕೆ ಬರುವುದಾಗಿ ಒಪ್ಪಿದ್ದಾರೆ ಎಂದ ಅವರು, ಕೇಂದ್ರ ಸಚಿವ ಅಮಿತ್ ಶಾ ಎ.29ರಂದು ಮಧ್ಯಾಹ್ನ 2.30ಕ್ಕೆ ಕಟಪಾಡಿಯಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿರುವರು ಎಂದರು.
ಕಾರ್ಕಳದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಈ ಹಿಂದೆ ಮೂರು ಬಾರಿ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ಬಂದಿದ್ದರು. ಆದರೆ ನಾವು ಸೇರಿಸಿಕೊಂಡಿಲ್ಲ. ಹೀಗಿರುವಾಗ ನಮ್ಮ ಪಕ್ಷದ ಕಾರ್ಯಕರ್ತರು ಅವರೊಂದಿಗೆ ಹೋಗುವುದು ಹೌದೇ ಎಂದು ಪ್ರಶ್ನಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಪ್ರಾಧಿಕಾರದಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ 85-90ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ನಡೆಸಲಾಗಿದೆ. ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ 12ಕೋಟಿ ರೂ., ಉಡುಪಿ -5ಕೋಟಿ ರೂ., ಕಾರ್ಕಳ 10ಕೋಟಿ ರೂ., ಕುಂದಾಪುರ 3.5ಕೋಟಿ ರೂ., ಬೈಂದೂರು 2ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿ ಗಳನ್ನು ಮಾಡಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕಾರ್ಯದರ್ಶಿ ಗುರುಪ್ರಸಾದ್, ಮಾಧ್ಯಮ ವಿಭಾಗದ ಸಂಚಾಲಕ ಶ್ರೀನಿಧಿ ಹೆಗ್ಡೆ, ವಕ್ತಾರ ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.







