ಭಾರತದ ಕಂಪೆನಿ ತಯಾರಿಸಿದ ಇನ್ನೊಂದು ಕೆಮ್ಮಿನ ಸಿರಪ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಹೊಸದಿಲ್ಲಿ: ವಿಶ್ವ ಆರೋಗ್ಯ ಸಂಸ್ಥೆಯು ಭಾರತದ ಸಂಸ್ಥೆಯೊಂದು ಉತ್ಪಾದಿಸಿದ ಕೆಮ್ಮಿನ ಸಿರಪ್ ಬಗ್ಗೆ ಎಚ್ಚರಿಕೆ ನೀಡಿದೆ. ಈ ಸಿರಪ್ ಮಾರ್ಷಲ್ ದ್ವೀಪಗಳು ಮತ್ತು ಮೈಕ್ರೊನೇಷ್ಯಾದಲ್ಲಿ ಮಾರಾಟವಾಗುತ್ತಿವೆ. ಭಾರತದಲ್ಲಿ ಉತ್ಪಾದಿಸಲಾಗುವ ಕೆಮ್ಮಿನ ಸಿರಪ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳೆದ ಏಳು ತಿಂಗಳ ಅವಧಿಯಲ್ಲಿ ನೀಡಿದ ಮೂರನೇ ಎಚ್ಚರಿಕೆ ಇದಾಗಿದೆ. ಈ ಹಿಂದೆ ಗಾಂಬಿಯಾ ಮತ್ತು ಉಜ್ಬೆಕಿಸ್ತಾನದಲ್ಲಿ ಮಾರಾಟವಾಗುತ್ತಿದ್ದ ಕೆಮ್ಮಿನ ಸಿರಪ್‌ಗಳ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.
ಇದೀಗ ನೀಡಲಾಗಿರುವ ಎಚ್ಚರಿಕೆ ಪಂಜಾಬ್ ರಾಜ್ಯದ ಕ್ಯೂ ಪಿ ಫಾರ್ಮಾಕೆಮ್ ಲಿಮಿಟೆಡ್ ಉತ್ಪಾದಿಸಿದ ಹಾಗೂ ಹರ್ಯಾಣಾದ ಟ್ರಿಲಿಯಂ ಫಾರ್ಮಾ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಕೆಮ್ಮಿನ ಸಿರಪ್ ಎಂದು ಹೇಳಲಾಗಿದೆ.
ಅಕ್ಟೋಬರ್ 2023 ಎಕ್ಸ್‌ಪೈರಿ ಇರುವ ಒಂದು ನಿರ್ದಿಷ್ಟ ಬ್ಯಾಚಿನ ಸಿರಪ್‌ನಲ್ಲಿ ಹಾನಿಕಾರಕ ಮಟ್ಟದ ಅಂಶಗಳು ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಸಿರಪ್‌ನಲ್ಲಿ ಕೆಮ್ಮು ಮತ್ತು ಕಫಗಟ್ಟುವ ಸಮಸ್ಯೆಗಾಗಿ Guaifenesinನಲ್ಲಿ ಅಸ್ವೀಕಾರಾರ್ಹ ಮಟ್ಟದ diethylene glycol ಮತ್ತು ethylene glycol ಇದೆಯೆಂದು ಆಸ್ಟ್ರೇಲಿಯಾದ ಥೆರಾಪೆಟಿಕ್ ಗುಡ್ಸ್ ಅಡ್ಮಿನಿಸ್ಟ್ರೇಶನ್ ಹೇಳಿದೆಯೆಂದು ವರದಿಯಾಗಿದೆ. ಇದೇ ಹಾನಿಕಾರಕಗಳು ಗಾಂಬಿಯಾದಲ್ಲಿ 70 ಮಕ್ಕಳು ಹಾಗೂ ಉಜ್ಬೆಕಿಸ್ತಾನದಲ್ಲಿ 18 ಮಕ್ಕಳು ಕಿಡ್ನಿ ಸೋಂಕಿನಿಂದ ಸಾವನ್ನಪ್ಪಲು ಕಾರಣವೆಂದು ಹೇಳಲಾಗಿದೆ.
ಈ ಸಿರಪ್ ಬಳಸದಂತೆ ಹಾಗೂ ಪೂರೈಕೆ ಸರಪಳಿಗಳ ಮೇಲೆ ನಿಗಾ ಇಡುವಂತೆ ಸಂಬಂಧಿತ ಸಂಸ್ಥೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.







