ಸರ್ಕಾರಿ ಯೋಜನೆಯಲ್ಲಿ ಭ್ರಷ್ಟಾಚಾರವೇ ಬಿಜೆಪಿ ಸಾಧನೆ : ಹೇಮನಾಥ ಶೆಟ್ಟಿ
ಪುತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು : ಅಕ್ರಮ ಸಕ್ರಮದಲ್ಲಿ ಸರ್ಕಾರಿ ಭೂಮಿಯನ್ನು ಬಿಜೆಪಿಗರು ಲಕ್ಷಾಂತರ ರುಪಾಯಿಗೆ ಮಾರಾಟ ಮಾಡಿ ದ್ದಾರೆ. ಸರ್ಕಾರದ ಯೋಜನೆಗಳಲ್ಲಿ ಭ್ರಷ್ಟಾಚಾರ ಎಸಗಿರುವುದೇ ಬಿಜೆಪಿ ಸಾಧನೆಯಾಗಿದೆ. ಸರ್ವಾಧಿಕಾರಿ ಯಂತೆ ಮೆರೆಯುತ್ತಿರುವ ಬಿಜೆಪಿಗೆ ಮತದಾರರು ತಕ್ಕಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಅವರು ಹೇಳಿದರು.
ಅರಿಯಡ್ಕ ಗ್ರಾಮದ ಕೌಡಿಚ್ಚಾರಿನಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ನಾವು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಸಮಾಜ ಸೇವಕರಾದ ಅಶೋಕ್ ರೈ ಅವರ ಕೈ ಬಲಪಡಿಸಲು ಪ್ರತಿಯೊಬ್ಬ ಕಾರ್ಯ ಕರ್ತರೂ ಮನೆ ಮನೆ ತೆರಳಿ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮತ್ತು ಗ್ಯಾರಂಟಿ ಭರವಸೆಯನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಕಾಂಗ್ರೆಸ್ ಜನಪರ ಯೋಜನೆಯನ್ನು ಜಾರಿಗೆ ತರುತ್ತಿದೆ. ಕಾಂಗ್ರೆಸ್ ದೇಶದ ಜನರ ಜೀವನಾಡಿ. ಕಾಂಗ್ರೆಸ್ ಸರ್ಕಾರವಿದ್ದರೆ ಮಾತ್ರ ಜನ ನೆಮ್ಮದಿ ಯಿಂದ ಬದುಕಲು ಸಾಧ್ಯ. ಬಡಜನರಿಗಾಗಿಯೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದೆ ಎಂದಿದೆ. ನಾಳೆಯ ನೆಮ್ಮದಿಗಾಗಿ ಪ್ರತಿಯೊಬ್ಬರೂ ಕಾಂಗ್ರೆಸ್ ಬೆಂಬಲಿಸಬೇಕಾಗಿದೆ. ಕಾಂಗ್ರೆಸಿಗೆ ಮತ ನೀಡುವ ಮೂಲಕ ಕ್ಷೇತ್ರದ ಅಭಿವೃದ್ದಿಗಾಗಿ ಆಶೀರ್ವಾದ ಮಾಡಿ. ನಾನೆಂದೂ ಕೊಟ್ಟ ಮಾತನ್ನು ತಪ್ಪಿ ನಡೆಯಲಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಮಾತನಾಡಿದರು.
ಮಹಮ್ಮದ್ ಬಡಗನ್ನೂರು, ರಾಜೀವ ರೈ ಕುತ್ಯಾಡಿ, ಎಂ.ಎಸ್ ಮಹಮ್ಮದ್, ಲ್ಯಾನ್ಸಿ ಮಸ್ಕರೇನಸ್,ಅನ್ವರ್ ಖಾಸಿಂ,ಮುರಳೀದರ್ ರೈ ಮಠಂತಬೆಟ್ಟು,ಸಾರ್ತಕ್ ರೈ ಅರಿಯಡ್ಕ, ರಫೀಕ್ ದರ್ಕಾಸ್, ಬಶೀರ್ ಕೌಡಿಚ್ಚಾರ್, ಇಸಾಕ್ ಸಾಲ್ಮರ, ಶಿವರಾಮ ಮಣಿಯಾಣಿ, ದಿವ್ಯನಾಥ ಶೆಟ್ಟಿ, ಇಕ್ಬಾಲ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.







