ಕೇರಳ ಯುವ ಸಮಾವೇಶದಲ್ಲಿ ಪ್ರಶ್ನೆಗಳನ್ನು ಎದುರಿಸಲು ನಿರಾಕರಿಸಿದ ಪ್ರಧಾನಿ ಮೋದಿ: ವರದಿ

ಕೊಚ್ಚಿ: ಇಲ್ಲಿ ಎ.24ರಂದು ನಡೆದಿದ್ದ ಬಿಜೆಪಿಯ ‘ಯುವಂ 2023 ’ ಸಮಾವೇಶದಲ್ಲಿ ಯುವಜನರಿಂದ ಪ್ರಶ್ನೆಗಳನ್ನು ಎದುರಿಸಲು ನಿರಾಕರಿಸಿದ ಪ್ರಧಾನಿ ನರೇಂದ್ರ ಮೋದಿಯವರು 45 ನಿಮಿಷಗಳ ತನ್ನ ಭಾಷಣ ಮುಗಿದ ತಕ್ಷಣ ವೇದಿಕೆಯಿಂದ ನಿರ್ಗಮಿಸಿದ್ದರು. ಹೆಚ್ಚಿನ ಟಿವಿ ವಾಹಿನಿಗಳು ಸಮಾವೇಶವನ್ನು ‘ಅಭೂತಪೂರ್ವ ಕಾರ್ಯಕ್ರಮ’ ಎಂದು ಸಂಭ್ರಮಿಸಿದ್ದವು ಎಂದು newsclick.in ವರದಿ ಮಾಡಿದೆ.
ಆನ್ ಲೈನ್ ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಲು ಮತ್ತು ಪಕ್ಷದ ಕೇರಳ ಅಜೆಂಡಾದ ಕುರಿತು ಮೋದಿಯವರೊಂದಿಗೆ ಸಂವಾದ ನಡೆಸಲು ಯುವಂ ಸಮಾವೇಶವು ವೇದಿಕೆಯಾಗಲಿದೆ ಎಂದು ಬಿಜೆಪಿ ಹೇಳಿಕೊಂಡಿತ್ತು.
‘ವೈಬ್ರಂಟ್ ಯುಥ್ ಫಾರ್ ಮಾಡಿಫೈಯಿಂಗ್ ಇಂಡಿಯಾ’ ಹೆಸರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವು ರಾಜಕೀಯೇತರವಾಗಿರಲಿದೆ ಎಂದು ಹೇಳಲಾಗಿದ್ದರೂ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್,ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ಅನಿಲ್ ಕೆ.ಆ್ಯಂಟನಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಉಪಸ್ಥಿತರಿದ್ದರು.
ಸಿಪಿಎಂ ನೇತೃತ್ವದ ಎಲ್ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವಿನ ಸೈದ್ಧಾಂತಿಕ ಸಂಘರ್ಷದಲ್ಲಿ ಕೇರಳವು ಸಂಕಷ್ಟಕ್ಕೆ ಸಿಲುಕಿದೆ ಎಂದು ಮೋದಿ ತನ್ನ ಭಾಷಣದಲ್ಲಿ ಹೇಳಿದರು.
ಪ್ರಧಾನಿ ಮತ್ತು ಬಿಜೆಪಿ ಕೇರಳ ಅಭಿವೃದ್ಧಿ ಸಾಧನೆಗಳ ಬಗ್ಗೆ ಸುಳ್ಳು ಪ್ರಚಾರವನ್ನು ಹರಡುತ್ತಿದ್ದಾರೆ ಮತ್ತು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಆರೋಪಿಸಿದ್ದಾರೆ.
ಸಮಾವೇಶದ ಆಯೋಜನೆಯನ್ನು ಪ್ರಕಟಿಸಿದ್ದ ಬೆನ್ನಿಗೇ ಡಿವೈಎಫ್ಐ, ಮೋದಿಯವರಿಗೆ ಪ್ರಶ್ನೆಗಳನ್ನು ಕೇಳುವ ಮೊದಲು ಅವುಗಳನ್ನು ಪರಿಶೀಲಿಸಲಾಗುತ್ತದೆ ಎಂದು ಹೇಳಿತ್ತು.
ರವಿವಾರ ಮತ್ತು ಸೋಮವಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ಭಾರತದ ಯುವಜನರೇ-ಪ್ರಧಾನಿಯನ್ನು ಕೇಳಿ ’ಎಂಬ ವಿಷಯದೊಂದಿಗೆ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಗಳಲ್ಲಿ ಡಿವೈಎಫ್ಎ ಪ್ರಧಾನಿಯವರಿಗೆ 100 ಪ್ರಶ್ನೆಗಳನ್ನು ಕೇಳಿತ್ತು.
ಪ್ರತಿ ವರ್ಷ ಯುವಜನರಿಗೆ ಎರಡು ಲ.ಉದ್ಯೋಗಗಳು, ವಿದೇಶಗಳಲ್ಲಿರುವ ಕಪ್ಪುಹಣವನ್ನು 100 ದಿನಗಳಲ್ಲಿ ದೇಶಕ್ಕೆ ವಾಪಸ್,ರೈತರಿಗೆ ಎಂಎಸ್ಪಿ ಖಾತರಿ ಹಾಗೂ ಮಹಿಳೆಯರು,ದಲಿತರು,ಬುಡಕಟ್ಟು ಜನರು ಮತ್ತು ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಪರಿಹಾರ ಇವೇ ಮುಂತಾದ ಬಿಜೆಪಿಯ ಚುನಾವಣಾ ಭರವಸೆಗಳನ್ನು ಈ ಪ್ರಶ್ನೆಗಳು ಒಳಗೊಂಡಿವೆ.
ಪ್ರಶ್ನೆಗಳನ್ನು ಕೇಳುವ ಕುರಿತು ಆಲ್ಬರ್ಟ್ ಐನ್ಸ್ಟೈನ್ ಅವರ ಹೇಳಿಕೆಯನ್ನು ಡಿವೈಎಫ್ಐ ನೆನಪಿಸಿಕೊಂಡಿದೆ. ಪ್ರಶ್ನಿಸುವುದನ್ನು ತಡೆಯದಿರುವುದು ಮುಖ್ಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಅದು,ಮೋದಿಯವರು ಒಂಭತ್ತು ವರ್ಷಗಳ ಹಿಂದೆ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಬಳಿಕ ಎಂದಿಗೂ ಸುದ್ದಿಗೋಷ್ಠಿಯನ್ನು ನಡೆಸಿಲ್ಲ. ಅವರು ಪ್ರಶ್ನೆಗಳ ಬಗ್ಗೆ ಭಯಪಡುತ್ತಾರೆ ಎಂದು ಹೇಳಿದೆ.
ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತವು 107ನೇ ಸ್ಥಾನಕ್ಕೆ ಜಾರಿದ್ದು ಹೇಗೆ ಎನ್ನುವುದು ಡಿವೈಎಫ್ಐನ ಮೊದಲ ಪ್ರಶ್ನೆಯಾಗಿತ್ತು. ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ಎಂ.ಎಸ್.ಸ್ವಾಮಿನಾಥನ್ ಆಯೋಗದ ವರರಿಯನ್ನು ಜಾರಿಗೊಳಿಸಲು ಬಿಜೆಪಿ ಸರಕಾರವು ನಿರಾಕರಿಸುತ್ತಿರುವುದೇಕೆ ಎಂದೂ ಡಿವೈಎಫ್ಐ ಪ್ರಶ್ನಿಸಿತ್ತು ಎಂದು newsclick.in ವರದಿ ಮಾಡಿದೆ.
ವಿವಿಧ ಇಲಾಖೆಗಳಲ್ಲಿಯ 12 ಲಕ್ಷ ಮತ್ತು ರೈಲ್ವೆಯಲ್ಲಿಯ ಐದು ಲಕ್ಷ ಖಾಲಿ ಹುದ್ದೆಗಳನ್ನು ಕೇಂದ್ರ ಸರಕಾರವು ಏಕೆ ಭರ್ತಿ ಮಾಡಿಲ್ಲ? ಇದು ಸರಕಾರವು ದೇಶದ ಯುವಜನರನ್ನು ನಡೆಸಿಕೊಳ್ಳುವ ರೀತಿಯೇ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ವಿ.ವಾಸೀಫ್ ಪ್ರಶ್ನಿಸಿದರು.







