ಮೋದಿ ಉಪನಾಮ ಪ್ರಕರಣ: ರಾಹುಲ್ ಗಾಂಧಿ ಮೇಲ್ಮನವಿ ವಿಚಾರಣೆಯಿಂದ ಹಿಂದೆ ಸರಿದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ

ಹೊಸದಿಲ್ಲಿ: ಮೋದಿ ಉಪನಾಮ ಪ್ರಕರಣದಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಗೆ ನಿಯೋಜನೆಗೊಂಡಿದ್ದ ಗುಜರಾತ್ ಹೈಕೋರ್ಟ್‌ನ ನ್ಯಾಯಾಧೀಶರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.
ನ್ಯಾಯಮೂರ್ತಿ ಗೀತಾ ಗೋಪಿ ಅವರು ಪ್ರಕರಣವನ್ನು ಬೇರೆ ಪೀಠಕ್ಕೆ ನಿಯೋಜಿಸಲು ಮುಖ್ಯ ನ್ಯಾಯಮೂರ್ತಿಗೆ ಹಸ್ತಾಂತರಿಸುವಂತೆ ಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೊಸ ನ್ಯಾಯಾಧೀಶರನ್ನು ನಿಯೋಜಿಸಲು ಎರಡು ದಿನಗಳು ಬೇಕಾಗಬಹುದು ಎಂದು ರಾಹುಲ್ ಗಾಂಧಿ ವಕೀಲ PS ಚಾಪನೇರಿ NDTV ಗೆ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಪನಾಮದ ಕುರಿತು ಟೀಕೆ ಮಾಡಿರುವ ಪ್ರಕರಣದಲ್ಲಿ ಅವರ ಶಿಕ್ಷೆಯನ್ನು ಅಮಾನತುಗೊಳಿಸಬೇಕೆಂಬ ಅವರ ಮನವಿಯನ್ನು ಕೆಳ ನ್ಯಾಯಾಲಯವು ತಿರಸ್ಕರಿಸಿದ ನಂತರ ರಾಹುಲ್ ಗಾಂಧಿ ನಿನ್ನೆ ಗುಜರಾತ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲ್ಪಟ್ಟ ನಂತರ ಕಳೆದ ತಿಂಗಳು ರಾಹುಲ್ ಗಾಂಧಿಯನ್ನು ಸಂಸತ್ತಿನಿಂದ ಅನರ್ಹಗೊಳಿಸಲಾಯಿತು. ಈ ಶಿಕ್ಷೆಯನ್ನು ರದ್ದುಗೊಳಿಸದಿದ್ದರೆ ಅವರಿಗೆ ಸಂಸದರಾಗಿ ಮುಂದುವರಿಯಲು ಸಾಧ್ಯವಿಲ್ಲ ಮತ್ತು ಮುಂದಿನ ಎಂಟು ವರ್ಷಗಳ ಕಾಲ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ.
ಈ ತಿಂಗಳ ಆರಂಭದಲ್ಲಿ ಸೂರತ್ ನ್ಯಾಯಾಲಯಕ್ಕೆ ಸಲ್ಲಿಸಿದ ಮೇಲ್ಮನವಿಯಲ್ಲಿ, ವಿಚಾರಣಾ ನ್ಯಾಯಾಲಯವು ತನ್ನನ್ನು ಕಠಿಣವಾಗಿ ನಡೆಸಿಕೊಂಡಿದೆ ಎಂದು ರಾಹುಲ್ ಗಾಂಧಿ ವಾದಿಸಿದ್ದರು. ಅದರ ನಿರ್ಧಾರವು ಅವರಿಗೆ ಬದಲಾಯಿಸಲಾಗದ ಹಾನಿಯನ್ನುಂಟುಮಾಡಿದೆ ಎಂದು ಅವರು ಹೇಳಿಕೆ ನೀಡಿದ್ದರು.







