ಮಣಿಪಾಲ: ಸ್ಕೂಬಾ ಸ್ಕೂಲ್, ಮರೇನಾ ಬೌಲ್ಡರ್ ಉದ್ಘಾಟನೆ

ಉಡುಪಿ, ಎ.26: ಸೆಂಟರ್ ಫಾರ್ ವೈಲ್ಡರ್ನೆಸ್ ಮೆಡಿಸಿನ್ ಸಹಯೋಗ ದೊಂದಿಗೆ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಭಾರತದ ವಿಶ್ವವಿದ್ಯಾನಿಲಯವೊಂದರ ಮೊಟ್ಟಮೊದಲ ಸ್ಕೂಬಾ ಡೈವಿಂಗ್ ಸ್ಕೂಲ್ ಅನ್ನು ಇಂದು ಮಣಿಪಾಲದಲ್ಲಿ ಉದ್ಘಾಟಿಸಲಾಯಿತು.
ಮಣಿಪಾಲ ಸ್ಕೂಬಾ ಸ್ಕೂಲ್ ಮತ್ತು ಕ್ರೀಡಾ ಕ್ಲೈಂಬಿಂಗ್ ವಾಲ್- ಮರೇನಾ ಬೌಲ್ಡರ್‌ನ್ನು ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಮಾಹೆಯ ಕುಲಪತಿ ಡಾ.ಎಂ.ಡಿ.ವೆಂಕಟೇಶ್ ಮತ್ತು ಸಹ ಉಪಕುಲಪತಿ ಡಾ.ಶರತ್ ರಾವ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಎಂಸಿಪಿಎಚ್ ಡೀನ್ ಡಾ.ಅರುಣ್ ಮಯ್ಯ, ಕೆಎಂಸಿ ಮಣಿಪಾಲದ ಸಹ ಡೀನ್ ಡಾ.ಅನಿಲ್ ಭಟ್,ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರು ಉಪಸ್ಥಿತರಿದ್ದರು.
ಮಣಿಪಾಲ್ ಸ್ಕೂಬಾ ಸ್ಕೂಲ್ ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ವೈದ್ಯಕೀಯ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಉತ್ಸಾಹಿಗಳಿಗೆ ಸ್ಕೂಬಾ ಡೈವಿಂಗ್ ಸೂಚನೆಯನ್ನು ನೀಡುವ ಮೊದಲ ಸ್ಕೂಲ್ ಆಗಿದೆ. ಈ ಕೇಂದ್ರವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಇಂಟರ್ ನೇಷನಲ್ ಸ್ಕೂಬಾ ಸ್ಕೂಲ್ ಮೂಲಕ ಅತ್ಯಾಧುನಿಕ ಮತ್ತು ಮುಂದುವರಿದ ಹಂತಗಳವರೆಗಿನ ಕೋರ್ಸ್‌ಗಳನ್ನು ನೀಡುತ್ತದೆ. ಪ್ರಮಾಣ ಪತ್ರಗಳನ್ನು ಪಡೆಯುವ ಯಾರೂ ಸಹ ವಿಶ್ವದ ಯಾವುದೇ ಭಾಗದಲ್ಲೂ ಸ್ಕೂಬಾ ಡೈವಿಂಗ್‌ಗೆ ಮುಂದಾಗಬಹುದು.
ಸ್ಕೂಬಾ ಸ್ಕೂಲ್‌ನ್ನು ಉದ್ಘಾಟಿಸಿ ಮಾತನಾಡಿದ ಡಾ.ಎಚ್.ಎಸ್.ಬಲ್ಲಾಳ್, ಮಣಿಪಾಲ್ ಸ್ಕೂಬಾ ಸ್ಕೂಲ್ ಮತ್ತು ಮರೇನಾ ಬೌಲ್ಡರ್‌ನ್ನು ಪ್ರಾರಂಭಿಸಲು ನಾವು ಹೆಮ್ಮೆಪಡುತ್ತೇವೆ. ಇದು ವೈದ್ಯಕೀಯ ವೃತ್ತಿಪರರು ಮತ್ತು ವಿದ್ಯಾರ್ಥಿ ಗಳಿಗೆ ಸ್ಕೂಬಾ ಡೈವಿಂಗ್ ಮತ್ತು ಬೌಲ್ಡರಿಂಗ್ ಕಲಿಯಲು ಅವಕಾಶವನ್ನು ಕಲ್ಪಿಸುತ್ತದೆ. ಅಲ್ಲದೇ ಈ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಅವಕಾಶ ಕಲ್ಪಿಸಲಿದೆ ಎಂದರು.
ಇದೇ ವೇಳೆ ಮಾತನಾಡಿದ ಡಾ.ಎಂ.ಡಿ.ವೆಂಕಟೇಶ್, ಸೆಂಟರ್ ಫಾರ್ ವೈಲ್ಡರ್ನೆಸ್ ಮೆಡಿಸಿನ್ ಕ್ಷೇತ್ರದ ತರಬೇತಿ ಮತ್ತು ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರಲಿದೆ ಎಂದರು. ಮಾಹೆ ಮಣಿಪಾಲದಲ್ಲಿ ಮಣಿಪಾಲ್ ಸ್ಕೂಬಾ ಸ್ಕೂಲ್ ಮತ್ತು ಮರೇನಾ ಬೌಲ್ಡರ್ ತೆರೆಯುವುದರೊಂದಿಗೆ ವೈಲ್ಡರ್ನೆಸ್ ಮೆಡಿಸಿನ್‌ನಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯನ್ನು ಮುಂದುವರಿಸಲು ನಾವು ಆಶಿಸುತ್ತೇವೆ ಎಂದರು.
ತುರ್ತು ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಫ್ರೆಸ್ಟನ್ ಮಾರ್ಕ್ ಸಿರೂರ್, ಮಣಿಪಾಲ ಸ್ಕೂಬಾ ಸ್ಕೂಲ್ ಮತ್ತು ಮರೇನಾ ಬೌಲ್ಡರ್ ರಚನಾತ್ಮಕ ಮತ್ತು ಮಾರ್ಗದರ್ಶಿ ಕೋರ್ಸ್‌ಗಳ ಮೂಲಕ ಸುರಕ್ಷಿತ ಕಲಿಕಾ ವಾತಾವರಣದಲ್ಲಿ ಕ್ರೀಡೆಗಳನ್ನು ಕಲಿಯಲು ಇರುವ ಸೌಲಭ್ಯಗಳನ್ನು ಪರಿಚಯಿಸಿದರು. ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಜಯರಾಜ್ ಎಂ. ವಂದಿಸಿದರು.
ಇಲ್ಲಿ ಸ್ಕೂಬಾ ಡೈವಿಂಗ್ ಮತ್ತು ಸ್ಪೋರ್ಟ್ ಕ್ಲೈಂಬಿಂಗ್ ಕಲಿಯಲು ಆಸಕ್ತಿ ಹೊಂದಿರುವ ಎಲ್ಲರಿಗೂ ಮುಕ್ತ ಅವಕಾಶವಿದೆ. ಕೋರ್ಸ್‌ನ ವಿವರಗಳನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.







