ಉಡುಪಿಯಲ್ಲಿ ಶ್ರೀ ಶಂಕರ ಜಯಂತಿ
ಉಡುಪಿ, ಎ.26: ಜಗದ್ಗುರು ಶ್ರೀಶಂಕರಾಚಾರ್ಯ ಜಯಂತಿ ಪ್ರಯುಕ್ತ ಉಡುಪಿ ಜಿಲ್ಲಾ ಶ್ರೀಶಾಂಕರ ತತ್ವ ಪ್ರಸಾರ ಆಭಿಯಾನ ಮತ್ತು ಶ್ರೀ ಸ್ಥಾನಿಕ ಬ್ರಾಹ್ಮಣ ಸಂಘ ಕುಂಜಿಬೆಟ್ಟು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಉಡುಪಿ ಕುಂಜಿಬೆಟ್ಟಿನ ಶ್ರೀಶಾರದಾ ಮಂಟಪದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಮಾಜದ ಹಿರಿಯ ಪುರೋಹಿತರಾದ ಪ್ರತಾಪ್ ಭಟ್ ಪುತ್ತೂರು ಶ್ರೀ ಶಂಕರಾಚಾರ್ಯರ ಜೀವನ ಮತ್ತು ತತ್ವ ಗಳ ಬಗ್ಗೆ ಉಪನ್ಯಾಸ ನೀಡಿದರು. ಭಾರತದ ಓರ್ವ ಉದಾತ್ತ ದಾರ್ಶನಿಕರಾಗಿದ್ದು, ತಮ್ಮ ಜೀವಿತದ ಅತ್ಯಲ್ಪ ಸಮಯದಲ್ಲಿ ಸಮಗ್ರ ಭಾರತವನ್ನು ನಾಲ್ಕು ಬಾರಿ ಸುತ್ತಿ ಅಂದಿನ ಭಾರತದ ಧಾರ್ಮಿಕ ಪರಿಸ್ಥಿತಿಯನ್ನು ಸಿಂಹಾವಲೋಕನ ಮಾಡಿ ಸನಾತನ ಧರ್ಮವನ್ನು ಪುನರುತ್ತಾನ ಮಾಡಿದ ಯುಗ ಪುರುಷ ಶಂಕರರು ಎಂದರು.
ಶಂಕರರು ಉಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯವನ್ನು ಬರೆದು ಜನಸಾಮಾನ್ಯನೂ ಅದರ ಸತ್ವವನ್ನು ತಿಳಿಯುವಂತೆ ಮಾಡಿದರು. ಪಂಚಾಯತನ ಪೂಜಾ ಪದ್ದತಿ ಮೊದಲಾದ ಧಾರ್ಮಿಕ ಬದಲಾವಣೆ ಗಳಿಂದ ಕ್ರಾಂತಿ ಪುರುಷರೆನಿಸಿದರು. ಈ ಮೂಲಕ ಜಗದ್ಗುರುಗಳೆಸಿದರು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಶಂಕರಾಚಾರ್ಯರ ಜೀವನ ಮತ್ತು ತತ್ವಗಳ ಆಧಾರಿತ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾ ಗಿದ್ದು, ಅತಿಥಿಗಳು ವಿಜೇತರಿಗೆ ನಗದು ಬಹುಮಾನ ವಿತರಿಸಿದರು. ಉಪನ್ಯಾಸಕ ಪ್ರತಾಪ್ ಭಟ್ ಪುತ್ತೂರು ಇವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಪ್ರಭಾಕರ ಭಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷ ಮಂಜುನಾಥ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಶ್ರೀ ಶಾಂಕರ ತತ್ವ ಪ್ರಸಾರ ಆಭಿಯಾನದ ಜಿಲ್ಲಾ ಸಂಚಾಲಕ ವಿಶ್ವನಾಥ ಶ್ಯಾನುಭಾಗ್ ವಂದಿಸಿ, ನಿರ್ದೇಶಕ ಕೃಷ್ಣಕುಮಾರ ರಾವ್ ಮಟ್ಟು ಕಾರ್ಯಕ್ರಮ ಸಂಯೋಜಿಸಿದ್ದರು.







