ಬಿಎಸ್ ವೈ, ಡಿಕೆಶಿ ರಕ್ತದಲ್ಲಿ ಬರೆದುಕೊಡೋದು ಬೇಡ, ರಕ್ತದ ಕೊರತೆಯಾದರೆ ಕಷ್ಟ: ಎಚ್‍ಡಿಕೆ ವ್ಯಂಗ್ಯ

ಬೆಂಗಳೂರು, ಎ.26: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 150 ಸ್ಥಾನ ಗೆಲ್ಲುತ್ತದೆ ಎಂದು ರಕ್ತದಲ್ಲಿ ಬರೆದುಕೊಡುತ್ತೀನಿ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮುಂದೆ ರಕ್ತದ ಕೊರತೆ ಆದರೆ ಕಷ್ಟ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಪ ಡಿ.ಕೆ.ಶಿವಕುಮಾರ್ ರಕ್ತದಲ್ಲಿ ಬರೆದುಕೊಡೋದು ಬೇಡ. ಆಮೇಲೆ ರಕ್ತದ ಕೊರತೆ ಆದರೆ ಕಷ್ಟ. ಮತ್ತೊಂದೆಡೆ ಬಿ.ಎಸ್. ಯಡಿಯೂರಪ್ಪ ನೋಡಿದರೆ ಶೆಟ್ಟರ್ ಸೋಲುತ್ತಾರೆ ಎಂದೂ ರಕ್ತದಲ್ಲಿ ಬರೆದುಕೊಡುತ್ತೇನೆ ಎನ್ನುತ್ತಾರೆ. ಆದರೆ, ಯಾವ ನಾಯಕರು ರಕ್ತ ಕೊರತೆ ಮಾಡಿಕೊಳ್ಳೋದು ಬೇಡ ಎಂದರು.
ನಾನು 106 ಕ್ಷೇತ್ರದಲ್ಲಿ ಜನರನ್ನು ಭೇಟಿ ಮಾಡಿದ್ದೇನೆ. ನಿತ್ಯ ಒಂದೊಂದು ಕ್ಷೇತ್ರದಲ್ಲಿ 50-60 ಹಳ್ಳಿ ಸುತ್ತಿದ್ದೇನೆ. ಜನರ ಸಂಪರ್ಕದಲ್ಲಿ ಇದ್ದು, ಪಂಚರತ್ನ, ಜನತಾ ಜಲಧಾರೆ ಯಶಸ್ವಿಯಾಗಿದೆ. ನನ್ನ ರೋಡ್ ಶೋಗೆ ಜನ ಸ್ಪಂದನೆ ಸಿಕ್ಕಿದೆ. ದೇವನಹಳ್ಳಿಯಲ್ಲಿ ಜನ ಇಲ್ಲ ಎಂದು ಅಮಿತ್ ಶಾ ರೋಡ್ ಶೋ ರದ್ದಾಗಿದೆ. ಆದರೆ ನಮಗೆ ಜನರೇ ಆಶೀರ್ವಾದ ಮಾಡುತ್ತಾರೆ. ನಾವು ಯಾರಿಗೂ ಹಣ ಕೊಟ್ಟು ಸಮೀಕ್ಷೆ ಮಾಡಿಸಿಲ್ಲ. ಅದರ ಅವಶ್ಯಕತೆ ನಮಗೆ ಇಲ್ಲ. ಜನರ ಬೆಂಬಲದ ಆಧಾರದಲ್ಲಿ ನಾವು ಬಹುಮತ ಬರುತ್ತದೆ ಎಂದು ಹೇಳುತ್ತಿದ್ದೇವೆ ಎಂದು ನುಡಿದರು.
ನನ್ನ ಕಾರ್ಯಕರ್ತರೇ ನನ್ನ ಪ್ರಚಾರಕರು. ನಮ್ಮ ಕಾರ್ಯಕರ್ತರ ಶಕ್ತಿ ಮುಂದೆ ಯಾವ ನಾಯಕರ ಅವಶ್ಯಕತೆ ಇಲ್ಲ. ಗಡಿ ಭಾಗದ ಕೆಲವು ಕ್ಷೇತ್ರದಲ್ಲಿ ತೆಲಂಗಾಣ ಶಾಸಕರು ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾರೆ ಎಂದ ಅವರು, ತುಮಕೂರಿನ 11 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುತ್ತೆ ಎಂಬ ನಂಬಿಕೆ ಇದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಾಧ್ಯಕ್ಷ ನೇಮಕ: ಜನತಾದಳದ ಕಾರ್ಯಾಧ್ಯಕ್ಷರಾಗಿ ಅಲ್ಕೊಡ್ ಹನುಮಂತಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಘೋಷಣೆ ಮಾಡಿದರು.







