ಮಣಿಪಾಲ: ವಿದ್ಯಾರ್ಥಿ ಸಹಿತ ಮೂವರು ಡ್ರಗ್ಸ್ ಪೆಡ್ಲರ್‌ಗಳ ಬಂಧನ

ಮಣಿಪಾಲ, ಎ.26: ನಿಷೇಧಿತ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ಮಣಿಪಾಲ ಪೊಲೀಸರು ಓರ್ವ ವಿದ್ಯಾರ್ಥಿ ಸೇರಿದಂತೆ ಮೂವರು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿ, ಲಕ್ಷಾಂತರ ರೂ. ಬೆಲೆಯ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಮಣಿಪಾಲ ಎಂಐಟಿ ವಿದ್ಯಾರ್ಥಿ, ಮಹಾರಾಷ್ಟ್ರ ರಾಜ್ಯದ ಅಕ್ಷಯ್ ಕುಮಾವತ್(36), ಬೆಂಗಳೂರಿನ ಸರ್ಜಾಪುರ ನಿವಾಸಿ ಶ್ರೀನಿವಾಸ ಗೌಡ(31), ಬೆಂಗಳೂರಿನ ಬಿಗ್‌ಬಾಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಬಾಣಸವಾಡಿ ನಿವಾಸಿ ಐಸಾಕ್ ಶ್ಯಾಮ್(29) ಬಂಧಿತ ಆರೋಪಿಗಳು.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ಜಾಲದ ಪತ್ತೆ ಸಂಬಂಧ ಉಡುಪಿ ಎಸ್ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ. ಹಾಗೂ ಎಸ್ಸೈ ನವೀನ್ ನಾಯ್ಕ ನೇತೃತ್ವದ ತಂಡ ಮಣಿಪಾಲ ಮತ್ತು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಪೆಡ್ಲರ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಿತು. ಅದರಂತೆ ಎ.24ರಂದು ಮಣಿಪಾಲದ ಈಶ್ವರ ನಗರದ ಜನತಾ ಟವರ್ ಎದುರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇವರಿಂದ 2.20ಲಕ್ಷ ರೂ. ಮೌಲ್ಯದ 22.11 ಗ್ರಾಂ ಎಂಡಿಎಂ ಮಾತ್ರೆಯ ಪೌಡರನ್ನು ವಶಪಡಿಸಿಕೊಳ್ಳಲಾಗಿದೆ. ಮಣಿಪಾಲ ನಗರದ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳನ್ನು ಸರಬರಾಜು ಮಾಡುತ್ತಿದ್ದ ಪೆಡ್ಲರ್‌ಗಳ ಜಾಲವನ್ನು ಪತ್ತೆ ಮಾಡಿರುವ ಪೊಲೀಸರು ಈ ಕುರಿತ ತನಿಖೆಯನ್ನು ಮುಂದುವರಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಥೋಮ್ಸನ್, ಅಬ್ದುಲ್ ರಝಾಕ್, ಸಲ್ಮಾನ್ ಖಾನ್, ಚೆನ್ನೇಶ್ ಕೆ., ರೇವಣ ಸಿದ್ಧ, ಚಾಲಕ ಮಹಾಬಲೇಶ್ವರ ಪಾಲ್ಗೊಂಡಿದ್ದರು.








