ಮಾಹಿತಿ ನೀಡಲು ನಿರಾಕರಣೆ: ಕಸಾಪ ಅಧ್ಯಕ್ಷ ಮಹೇಶ ಜೋಶಿಗೆ 50 ಸಾವಿರ ರೂ.ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು, ಎ.26: ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷ ಮಹೇಶ್ ಜೋಶಿ ಅವರಿಗೆ ಹಳೆಯ ಎರಡು ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ 50 ಸಾವಿರ ರೂ.ದಂಡ ವಿಧಿಸಿ, ಆದೇಶ ಹೊರಡಿಸಿದೆ.
ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕ ಹಾಗೂ ಕೇಂದ್ರ ಮಾಹಿತಿ ಅಧಿಕಾರಿಯಾಗಿದ್ದ ಮಹೇಶ್ ಜೋಶಿ ಅವರಿಗೆ ಕೇಂದ್ರ ಮಾಹಿತಿ ಆಯೋಗವು 25 ಸಾವಿರ ರೂ. ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಜೋಶಿ ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಜೋಶಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಲ್ಲದೆ ವಿನಾಕಾರಣ ರಿಟ್ ಹಾಕಿ ಕೋರ್ಟ್ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ಮತ್ತೆ 25 ಸಾವಿರ ರೂ. ದಂಡ ವಿಧಿಸಿದೆ.
ಎಸ್.ಬಿ.ಭಜಂತ್ರಿ ಎಂಬುವವರು 2009ರ ಎ.9ರಂದು ಕೆಲವು ಮಾಹಿತಿಗಳನ್ನು ನೀಡುವಂತೆ ಕೋರಿ ದೂರದರ್ಶನದ ಕೇಂದ್ರ ಮಾಹಿತಿ ಅಧಿಕಾರಿಯಾಗಿದ್ದ ಮಹೇಶ ಜೋಶಿ ಅವರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಮಾಹಿತಿಯನ್ನು ನೀಡಲು ಮಹೇಶ ಜೋಶಿ ನಿರಾಕರಿಸಿದ್ದರು.
ಈ ವಿಷಯ ಪ್ರಶ್ನಿಸಿದ್ದ ಭಜಂತ್ರಿ ಕೇಂದ್ರ ಮಾಹಿತಿ ಆಯೋಗದ ಮುಂದೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಆಯೋಗವು 10 ದಿನಗಳಲ್ಲಿ ಮಾಹಿತಿ ನೀಡುವಂತೆ ಮಹೇಶ್ ಜೋಶಿಗೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ಮಹೇಶ 2011ರಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಜೋಶಿ ಪರ ವಕೀಲರು ವಾದಿಸಿ, ಆಯೋಗದ ಆದೇಶದ ಮರುಪರಿಶೀಲನೆಗೆಂದು ಆಯೋಗದ ಮುಂದೆ ಸಲ್ಲಿಸಿರುವ ಮನವಿಯ ವಿಚಾರಣೆ ಮುಗಿಯುವವರೆಗೆ ಮಾಹಿತಿ ನೀಡವುದಿಲ್ಲ ಎಂಬ ತಮ್ಮ ನಿಲುವನ್ನು ಮಾನ್ಯ ಮಾಡಬೇಕು ಎಂದು ಪೀಠಕ್ಕೆ ಮನವಿ ಮಾಡಿದ್ದರು.
ವಾದ ಆಲಿಸಿದ್ದ ನ್ಯಾಯಾಲಯವು ರಿಟ್ ಅರ್ಜಿಯನ್ನು ವಜಾ ಮಾಡಿದ್ದಲ್ಲದೇ, ವಿನಾಕಾರಣ ಅರ್ಜಿಯನ್ನು ದಾಖಲಿಸಿದ್ದಕ್ಕಾಗಿ ಕೇಂದ್ರ ಮಾಹಿತಿ ಅಧಿಕಾರಿ ಮಹೇಶ ಜೋಶಿಗೆ 25 ಸಾವಿರ ರೂ. ದಂಡ ವಿಧಿಸಿತು. ಆದೇಶದ ಒಂದು ತಿಂಗಳಲ್ಲಿ ಅದನ್ನು ಕೊಡಬೇಕೆಂದು ಹೈಕೋರ್ಟ್ ತೀರ್ಪು ಹೇಳಿದೆ.
ಮತ್ತೊಂದು ಪ್ರಕರಣದಲ್ಲಿ ಬಿ.ಅಶೋಕ ಎಂಬುವವರು ಹಲವು ಮಾಹಿತಿ ನೀಡಬೇಕು ಎಂದು ಕೋರಿ ಮಾಹಿತಿ ಹಕ್ಕಿನಡಿ 9 ಅರ್ಜಿಗಳನ್ನು ಬೆಂಗಳೂರು ದೂರದರ್ಶನಕ್ಕೆ ಸಲ್ಲಿಸಿದ್ದರು. ಮಾಹಿತಿ ನೀಡಲು ಆಗುವ 50,160 ರೂಪಾಯಿಗಳನ್ನು ಕಟ್ಟಬೇಕೆಂದು ಕೇಂದ್ರ ಮಾಹಿತಿ ಅಧಿಕಾರಿಯಾಗಿದ್ದ ಮಹೇಶ್ ಜೋಶಿ ಆದೇಶ ಹೊರಡಿಸಿದ್ದರು.
ಈ ಆದೇಶವನ್ನು ಪ್ರಶ್ನಿಸಿದ್ದ ಬಿ.ಅಶೋಕ ಕೇಂದ್ರ ಮಾಹಿತಿ ಆಯೋಗದ ಮುಂದೆ ಅಹವಾಲನ್ನು ಸಲ್ಲಿಸಿದ್ದರು. ಇವರ ಅರ್ಜಿಯನ್ನು ಮಾನ್ಯ ಮಾಡಿದ ಆಯೋಗವು ಬಿ.ಅಶೋಕ ಅವರು ಕೇಳಿರುವ ಮಾಹಿತಿಯನ್ನು 2 ವಾರದೊಳಗೆ ಕೋಡಬೇಕು. ಹಾಗೂ ನಿರ್ದಿಷ್ಟ ಅವಧಿಯಲ್ಲಿ ಮಾಹಿತಿ ನೀಡದ ಕಾರಣ ಮಾಹಿತಿ ಅಧಿಕಾರಿ ಮಹೇಶ್ ಜೋಶಿಗೆ 25 ಸಾವಿರ ರೂ. ದಂಡ ವಿಧಿಸಿತು.
ಈ ದಂಡದ ಹಣವನ್ನು ಮಹೇಶ್ ಜೋಶಿ ಅವರ ಜನವರಿ – ಮೇ 2018ರ ಸಂಬಳದಲ್ಲಿ ಕಡಿತಗೊಳಿಸಬೇಕು ಎಂದು ಸಂಬಂಧಪಟ್ಟ ಇಲಾಖೆಗೆ ಆದೇಶಿಸಿತು. ಕೇಂದ್ರ ಮಾಹಿತಿ ಆಯೋಗವು ನೀಡಿದ್ದ ಆದೇಶ ಪ್ರಶ್ನಿಸಿದ ಜೋಶಿ ರಿಟ್ ಅರ್ಜಿ ಹಾಕಿದ್ದರು.
ಇವರು ಸಲ್ಲಿಸಿದ್ದ ವಿಚಾರಣೆ ನಡೆಸಿದ ಹೈಕೋರ್ಟ್, ವಿನಾಕಾರಣ ರಿಟ್ ಅರ್ಜಿ ದಾಖಲಿಸಿರುವ ಕೇಂದ್ರ ಮಾಹಿತಿ ಅಧಿಕಾರಿಯ ನಡವಳಿಕೆ ಖಂಡಿತವಾಗಿಯೂ ಖಂಡನೆಗೆ ಅರ್ಹವಾಗಿದೆ ಎಂದು ತಿಳಿಸಿದೆ. ಈ ಎರಡು ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಹಾಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ಮಹೇಶ್ ಜೋಶಿ ಒಟ್ಟು 50 ಸಾವಿರ ರೂ.ದಂಡ ತೆರಬೇಕಿದೆ.







