ಬಿಹಾರ ಸರಕಾರದಿಂದ ಗ್ಯಾಂಗ್‌ಸ್ಟರ್-ರಾಜಕಾರಣಿ ಆನಂದ್ ಮೋಹನ್ ಬಿಡುಗಡೆ: ಕೇಂದ್ರದ ಅಸಮಾಧಾನ

ಹೊಸದಿಲ್ಲಿ,ಎ.25: ಗ್ಯಾಂಗ್‌ಸ್ಟರ್-ರಾಜಕಾರಣಿ ಆನಂದ ಮೋಹನ್ ಅವರನ್ನು ಜೈಲಿನಿಂದ ತ್ವರಿತವಾಗಿ ಬಿಡುಗಡೆಗೊಳಿಸಿದ ಬಿಹಾರ ಸರಕಾರದ ನಿರ್ಧಾರಕ್ಕೆ ಕೇಂದ್ರ ಸರಕಾರವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈಗ ನಿಷ್ಕ್ರಿಯವಾಗಿರುವ ಬಿಹಾರ ಪೀಪಲ್ಸ್ ಪಾರ್ಟಿಯ ಸಂಸ್ಥಾಪಕನಾದ ಆನಂದ ಮೋಹನ್, 1994ರಲ್ಲಿ ನಡೆದ ಗೋಪಾಲ್ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿ.ಕೃಷ್ಣಯ್ಯ ಅವರ ಕೊಲೆ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿಸಿ ಬಿಹಾರದ ನ್ಯಾಯಾಲಯವೊಂದು ತೀರ್ಪು ನೀಡಿತಕ್ತು. ಬಿಹಾರ ಪೀಪಲ್ಸ್ ಪಾರ್ಟಿಯ ಇನ್ನೋರ್ವ ಗ್ಯಾಂಗ್‌ಸ್ಟರ್ ರಾಜಕಾರಣಿ ಚೋಟಾನ್ ಶುಕ್ಲಾ ಹತ್ಯೆಯನ್ನು ಖಂಡಿಸಿಪ್ರತಿಭಟನೆ ನಡೆಸುತ್ತಿದ್ದ ಜನರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದ ಪ್ರಕರಣದಲ್ಲೂ ಆತನನ್ನು ದೋಷಿಯೆಂದು ಪರಿಗಣಿಸಿ ನ್ಯಾಯಾಲಯ ತೀರ್ಪು ನೀಡಿತ್ತು.
ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ 26 ಕೈದಿಗಳನ್ನು ಬಿಡುಗಡೆಗೊಳಿಸುವ ಕುರಿತು ಬಿಹಾರ ಸರಕಾರವು ಸೋಮವಾರ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಮಾಜಿ ಸಂಸದನಾದ ಮೋಹನ್ ನ ಹೆಸರು ಕೂಡಾ ಒಳಗೊಂಡಿತ್ತು. ಕರ್ತವ್ಯದಲ್ಲಿದ್ದ ಸರಕಾರಿ ಉದ್ಯೋಗಸ್ಥನನ್ನು ಕೊಲೆ ಮಾಡಿದ ಆರೋಪದಲ್ಲಿ ದೋಷಿಗಳೆಂದು ಪರಿಗಣಿಸಲ್ಪಟ್ಟವರ ಶಿಕ್ಷೆಯನ್ನು ರದ್ದುಪಡಿಸುವುದಕ್ಕೆ ಅವಕಾಶ ನಿರಾಕರಿಸುವ ಕಾರಾಗೃಹ ಕೈಪಿಡಿಗೆ ಬಿಹಾರ ಸರಕಾರ ತಿದ್ದುಪಡಿ ಮಾಡಿತ್ತು.
ಈ ತಿದ್ದುಪಡಿಯಿಂದಾಗಿ, ಒಂದು ವೇಳೆ ಇಂತಹ ಅಪರಾಧಗಳಲ್ಲಿ 14 ವರ್ಷ ಅಥವಾ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದಲ್ಲಿ ಅವರನ್ನು ಬಿಡುಗಡೆಗೊಳಿಸುವುದಕ್ಕೆ ಸಾಧ್ಯವಾಗಲಿದೆ.
ಪ್ರಸಕ್ತ ಸಹರ್ಸಾ ಜಿಲ್ಲಾ ಜೈಲಿನಲ್ಲಿ ಮೋಹನ್ ಅವರನ್ನು ಇರಿಸಲಾಗಿದ್ದು, ಇತ್ತೀಚೆಗೆ ಕುಟುಂಬವೊಂದರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅವರನ್ನು ಪರೋಲ್ ನಲ್ಲಿ ಬಿಡುಗಡೆಗೊಳಿಸಲಾಗಿತ್ತು.
ಈ ಮಧ್ಯೆ ಆನಂದ್ ಮೋಹನ್ ಅವರ ಬಿಡುಗಡೆಯನ್ನು ಕಾರಣವಾದ, ಕಾರಾಗೃಹ ಕೈಪಿಡಿಯನ್ನು ತಿದ್ದುಪಡಿಗೊಳಿಸಿರುವದನ್ನು ಕೇಂದ್ರ ಐಎಎಸ್ ಅಧಿಕಾರಿಗಳ ಸಂಘ ಖಂಡಿಸಿದ್ದು, ಬಿಹಾರ ಸರಕಾರದ ನಡೆಯು ನ್ಯಾಯವನ್ನು ನಿರಾಕರಿಸಿರುವುದಕ್ಕೆ ಸಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.







