ಅಮಿತ್ ಶಾ ಪ್ರಚೋದನಾತ್ಮಕ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು: ಮಲ್ಲಿಕಾರ್ಜುನ ಖರ್ಗೆ

ಹುಬ್ಬಳ್ಳಿ, ಎ. 26: ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಂಗೆಗಳು ಆಗುತ್ತವೆ’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಪ್ರಚೋದನಕಾರಿಯಾಗಿದ್ದು, ಕರ್ನಾಟಕ ರಾಜ್ಯದ ಜನತೆ ಕೆಟ್ಟವರಿದ್ದಾರೆಯೇ? ಕಾಂಗ್ರೆಸ್ ಸರಕಾರ ಆಡಳಿತ ಮಾಡಿಲ್ಲವೇ?’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣೆಯನ್ನೇ ಮಾಡಿಲ್ಲವೇ? ಶಾಂತಿ ಪ್ರಿಯ ಕರ್ನಾಟಕದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡುತ್ತಿರುವ ಪ್ರಚೋದನಾತ್ಮಕ ಹೇಳಿಕೆಗಳನ್ನು ಕೂಡಲೇ ನಿಲ್ಲಿಸಬೇಕು’ ಎಂದು ಇದೇ ವೇಳೆ ತಾಕೀತು ಮಾಡಿದರು.
‘ಪ್ರಧಾನಿ ಮೋದಿ, ಅಮಿತ್ ಶಾ ವಿಧಾನಸಭಾ ಚುನಾವಣೆಯಲ್ಲಿ ಅತಿಹೆಚ್ಚು ಪ್ರಚಾರ ಮಾಡುವುದನ್ನು ಗಮನಿಸಿದರೆ ಅವರು ಹತಾಶರಾಗಿದ್ದು, ಮೋದಿ ಹಾಗೂ ಶಾ ನೋಡಿ ಮತ ನೀಡಿ ಎಂದು ಬಸವರಾಜ ಬೊಮ್ಮಾಯಿ ಕೇಳುತ್ತಿದ್ದಾರೆ. ರಾಜ್ಯದ ಜನರಿಗೆ ಬಿಜೆಪಿ ಮತ್ತು ಬೊಮ್ಮಾಯಿ ನೀವೇನು ಮಾಡಿದ್ದೀರಿ? ಎಂಬುದನ್ನು ಜನ ಕೇಳುತ್ತಿದ್ದಾರೆ’ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
‘ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಗಗನಕ್ಕೆ ಏರಿದ್ದು, ಬಿಜೆಪಿ ದುರಾಡಳಿತಕ್ಕೆ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಒಂದು ಕಡೆ ಭ್ರಷ್ಟಾಚಾರ, ಇನ್ನೊಂದು ಕಡೆ ನಿರುದ್ಯೋಗ ತಾಂಡವವಾಡುತ್ತಿದೆ. ರಾಜ್ಯದಲ್ಲಿ ಅನೇಕ ನ್ಯೂನತೆಗಳಿವೆ. ಬಿಜೆಪಿ ಸರಕಾರ ತೆಗೆದು ಹಾಕಲು ಜನರು ತೀರ್ಮಾನ ಮಾಡಿದ್ದಾರೆ’ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.