1971ರ ಬಾಂಗ್ಲಾ ಸಮರದಲ್ಲಿ ಲಕ್ಷಾಂತರ ನಿರಾಶ್ರಿತರಿಗೆ ನೆರವಾಗಿದ್ದ ಸರಕಾರಿ ಅಧಿಕಾರಿ ಹಿಮಾಂಶು ಚೌಧುರಿ ನಿಧನ

ಅಗರ್ತಲಾ, ಎ.26: ಬಾಂಗ್ಲಾದೇಶ ವಿಮೋಚನಾ ಸಮರದಲ್ಲಿ ನಾಗರಿಕಸೇವಾ ಅಧಿಕಾರಿಯಾಗಿ ಸಲ್ಲಿಸಿದ ಉತೃಷ್ಟ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿಗೆ ಪುರಸ್ಕೃತರಾಗಿದ್ದ ಹಿಮಾಂಶು ಮೋಹನ್ ಚೌಧುರಿ ಅವರು ಮಂಗಳವಾರ ನಿಧನರಾಗಿದ್ದಾರೆ. 83 ವರ್ಷದ ಚೌಧುರಿ ಅವರು ವೃದ್ಧಾಪ್ಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರು ಅಗರ್ತಲಾದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
1971ರಲ್ಲಿ ಪಾಕ್ ಸೇನೆಯ ದಮನಕಾರ್ಯಾಚರಣೆಯಿಂದ ಪಾರಾಗಲು ನೆರೆಯ ರಾಷ್ಟ್ರವಾದ ಬಾಂಗ್ಲಾದಿಂದ ಭಾರತಕ್ಕೆ ವಲಸೆ ಬಂದ ಲಕ್ಷಾಂತರ ನಿರಾಶ್ರಿತರಿಗೆ ವಾಸ್ತವ್ಯ ಹಾಗೂ ಆಹಾರ ಪೂರೈಕೆಯ ಮೇಲ್ವಿಚಾರಣೆಯನ್ನು ಉತ್ಕೃಷ್ಟವಾಗಿ ನಿರ್ವಹಿಸಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.
ಚೌಧುರಿ ಅವರು ಇಬ್ಬರು ಪುತ್ರಿಯರು, ಬಂಧುಗಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಅವರ ಪತ್ನಿ ನಿಧನರಾಗಿದ್ದರು.
ಈಶಾನ್ಯ ಭಾರತದ ಪ್ರಪ್ರಥಮ ಪದ್ಮ ಪ್ರಶಸ್ತಿ ಪುರಸ್ಕೃತರಾದ ಮೋಹನ್ ಚೌಧರಿ ಅವರು ನಿಧನಕ್ಕೆ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.