ಮಂಗಳೂರು: ವಿದ್ಯಾರ್ಥಿಗೆ ಆನ್‌ಲೈನ್ ನಲ್ಲಿ ವಂಚನೆ

ಮಂಗಳೂರು, ಎ.26: ಗೂಗಲ್ ಕ್ರೋಮ್‌ನಲ್ಲಿ ಕಡಿಮೆ ಬೆಲೆಗೆ ಲ್ಯಾಪ್‌ಟಾಪ್ ಮಾರಾಟದ ಜಾಹೀರಾತು ನೀಡಿ 28,400 ರೂ. ವಂಚಿಸಿರುವ ಬಗ್ಗೆ ವಿದ್ಯಾರ್ಥಿಯೊಬ್ಬರು ಮಂಗಳೂರು ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.
ವಿದ್ಯಾರ್ಥಿಯು ತನ್ನ ಕೋರ್ಸ್‌ಗೆ ಸಂಬಂಧಿಸಿದಂತೆ ಗೂಗಲ್ ಕ್ರೋಮ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಅವರಿಗೆ ಕಡಿಮೆ ಬೆಲೆಗೆ ಲ್ಯಾಪ್‌ಟಾಪ್ ಲಭ್ಯವಿರುವ ಬಗ್ಗೆ ಜಾಹೀರಾತು ಕಂಡುಬಂತು. ಅದನ್ನು ಕ್ಲಿಕ್ ಮಾಡಿದಾಗ 9982245682 ಸಂಖ್ಯೆಯ ವಾಟ್ಸ್ ಆ್ಯಪ್ ಪೇಜ್ ತೆರೆದುಕೊಂಡಿತು. ಬಳಿಕ ಅದೇ ಸಂಖ್ಯೆಯಿಂದ ಕರೆ ಮಾಡಿದ ಅಪರಿಚಿತ ವ್ಯಕ್ತಿ ಎಚ್‌ಪಿ ಕಂಪೆನಿಯ ಲ್ಯಾಪ್‌ನ್ನು 12,000 ರೂ.ಗಳಿಗೆ ನೀಡುವುದಾಗಿಯೂ ಆರ್ಡರ್ ಖಚಿತ ಮಾಡಿಕೊಳ್ಳುವುದಕ್ಕೆ 400 ರೂ. ಪಾವತಿಸುವಂತೆಯೂ ತಿಳಿಸಿದ.
ಅದರಂತೆ ವಿದ್ಯಾರ್ಥಿಯು 400 ರೂ. ಪಾವತಿಸಿದ್ದು, ಬಳಿಕ ಅಪರಿಚಿತ ವ್ಯಕ್ತಿ ಲ್ಯಾಪ್‌ಟಾಪ್ ನೀಡುವುದಾಗಿ ನಂಬಿಸಿ ಹಲವು ಕಾರಣಗಳನ್ನು ಹೇಳಿ ಹಂತ ಹಂತವಾಗಿ 28,400 ರೂ. ವರ್ಗಾಯಿಸಿಕೊಂಡಿದ್ದಾನೆ ಎನ್ನಲಾಗಿದೆ.
Next Story