ಎಚ್‍ಡಿಕೆ ವಿರುದ್ಧ ಹಗರಣ ಆರೋಪ: ಕಬಳಿಸಲಾದ ಭೂಮಿ ಎಷ್ಟೆಂದು ಪರಿಶೀಲಿಸಲು ಕಾಲಾವಕಾಶ ನೀಡಿದ ಹೈಕೋರ್ಟ್

ಬೆಂಗಳೂರು, ಎ.26: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಶಾಸಕ ಡಿ.ಸಿ.ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಕಬಳಿಸಿದ್ದಾರೆ ಎನ್ನಲಾದ ಜಮೀನು 14 ಎಕರೆಯೋ ಅಥವಾ 71 ಎಕರೆಯೋ ಎಂಬುದನ್ನು ಪರಿಶೀಲಿಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಕಾಲಾವಕಾಶ ನೀಡಿದೆ.
ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರಕಾರದ ನಡೆ ಪ್ರಶ್ನಿಸಿ ಎಸ್.ಆರ್.ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠವು ನಡೆಸಿತು.
ಸರಕಾರದ ಪರ ವಕೀಲರು, 2014ರ ಆ.4ರ ವರದಿಯನ್ನು ಲೋಕಾಯುಕ್ತರು 2014ರ ಆ.5ರಂದು ಒಪ್ಪಿದ್ದು, ಲೋಕಾಯುಕ್ತ ಆದೇಶವು 14 ಎಕರೆಗೆ ಸಂಬಂಧಿಸಿದ್ದೋ ಅಥವಾ 71 ಎಕರೆಗೆ ಸಂಬಂಧಿಸಿದ್ದೋ ಎಂಬುದನ್ನು ಪರಿಶೀಲಿಸಲು ಕಾಲಾವಕಾಶ ಕೋರಿದರು. ನ್ಯಾಯಾಲಯವು ಇದಕ್ಕೆ ಸಹಮತ ವ್ಯಕ್ತಪಡಿಸಿ, ಅರ್ಜಿಯ ವಿಚಾರಣೆಯನ್ನು 2023ರ ಮೇ 23ಕ್ಕೆ ಮುಂದೂಡಿಕೆ ಮಾಡಿದೆ.





