ಎಲ್ ನಿನೋ, ಕಚ್ಚಾತೈಲ ಬೆಲೆಗಳಿಂದ ಭಾರತೀಯ ಆರ್ಥಿಕತೆಗೆ ಅಪಾಯ: ಕೇಂದ್ರ ವಿತ್ತ ಸಚಿವಾಲಯ

ಹೊಸದಿಲ್ಲಿ,ಎ.26: ಮಳೆಯ ಮೇಲೆ ಎಲ್ ನಿನೋ ಪರಿಣಾಮ, ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ (ಒಪೆಕ್)ಯಿಂದ ಕಚ್ಚಾತೈಲ ಉತ್ಪಾದನೆ ಕಡಿತ ಮತ್ತು ಮುಂದುವರಿದ ದೇಶಗಳಲ್ಲಿನ ಹಣಕಾಸು ತೊಂದರೆ ಇತ್ಯಾದಿಗಳು ಭಾರತದ ಆರ್ಥಿಕ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುವ ಅಪಾಯಕಾರಿ ಅಂಶಗಳಾಗಿವೆ ಎಂದು ಕೇಂದ್ರ ವಿತ್ತ ಸಚಿವಾಲಯವು ಮಂಗಳವಾರ ಮಾರ್ಚ್ ತಿಂಗಳಿಗೆ ತನ್ನ ಮಾಸಿಕ ಆರ್ಥಿಕ ಪರಾಮರ್ಶೆಯಲ್ಲಿ ಪಟ್ಟಿ ಮಾಡಿದೆ.
ಎಲ್ ನಿನೋದಿಂದ ಬರ ಪರಿಸ್ಥಿತಿ,ಕೃಷಿ ಉತ್ಪಾದನೆ ಕುಸಿತ ಮತ್ತು ಬೆಲೆಏರಿಕೆಯಂತಹ ಸಂಭಾವ್ಯ ಅಪಾಯಗಳ ವಿರುದ್ಧ ಕಟ್ಟೆಚ್ಚರ ವಹಿಸುವುದು ಮುಖ್ಯವಾಗಿದೆ ಎಂದು ಸರಕಾರವು ಹೇಳಿದೆ.
ಎಲ್ ನಿನೋ ವಿದ್ಯಮಾನವು ಪೂರ್ವ ಮತ್ತು ಮಧ್ಯ ಪೆಸಿಫಿಕ್ಗಳಲ್ಲಿಯ ಸಮುದ್ರದ ಮೇಲ್ಮೈ ತಾಪಮಾನ ಹೆಚ್ಚುವುದನ್ನು ಒಳಗೊಂಡಿರುತ್ತದೆ. ಇದು ಸಾಮಾನ್ಯವಾಗಿ ಪ್ರತಿ ಕೆಲವು ವರ್ಷಗಳಿಗೆ ಸಂಭವಿಸುತ್ತದೆ ಮತ್ತು ಬೆಳೆ ಹಾನಿ,ಬೆಂಕಿ ಅವಘಡ ಮತ್ತು ದಿಢೀರ್ ಪ್ರವಾಹಗಳಿಗೆ ಕಾರಣವಾಗುತ್ತದೆ.
ಈ ವರ್ಷ ದೇಶದಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಎ.11ರಂದು ತಿಳಿಸಿತ್ತು. ಆದರೂ,ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರಾ ಅವರು,ಮಳೆಗಾಲದ ಉತ್ತರಾರ್ಧದಲ್ಲಿ ಎಲ್ ನಿನೋ ಸ್ಥಿತಿಗಳು ಮಳೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು ಎಂದು ಹೇಳಿದ್ದರು.
ಒಪೆಕ್ನಿಂದ ಅಚ್ಚರಿದಾಯಕ ಉತ್ಪಾದನೆ ಕಡಿತವು ಎಪ್ರಿಲ್ನಲ್ಲಿ ತೈಲ ಬೆಲೆಗಳ ಏರಿಕೆಗೆ ಕಾರಣವಾಗಿದೆ ಎಂದು ವಿತ್ತ ಸಚಿವಾಲಯವು ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ.
ಮೇ ತಿಂಗಳಿನಿಂದ ಆರಂಭಿಸಿ ವರ್ಷಾಂತ್ಯದವರೆಗೆ ತಮ್ಮ ದೈನಂದಿನ ತೈಲ ಉತ್ಪಾದನೆಯನ್ನು ದಿನವೊಂದಕ್ಕೆ 3.66 ಮಿ.ಬ್ಯಾರಲ್ಗಳಷ್ಟು ತಗ್ಗಿಸುವುದಾಗಿ ಒಪೆಕ್ ಮತ್ತು ಅದರ ಮಿತ್ರದೇಶಗಳು ಎ.2ರಂದು ಹೇಳಿದ್ದವು. ಉತ್ಪಾದನೆಯಲ್ಲಿ ಕಡಿತದ ಪ್ರಮಾಣವು ಕಚ್ಚಾ ತೈಲಕ್ಕಾಗಿ ಜಾಗತಿಕ ಬೇಡಿಕೆಯ ಶೇ.3.7ರಷ್ಟಿದೆ. ಒಪೆಕ್ ಪ್ರಕಟಣೆಯ ಮರುದಿನವೇ ಜಾಗತಿಕ ಕಚ್ಚಾತೈಲ ಬೆಲೆಗಳು ಶೇ.5ರಷ್ಟು ಏರಿಕೆಯನ್ನು ಕಂಡಿದ್ದವು.
ಭಾರತವು ತನ್ನ ಶೇ.85ರಷ್ಟು ಕಚ್ಚಾತೈಲ ಅಗತ್ಯಗಳಿಗಾಗಿ ಆಮದನ್ನೇ ಅವಲಂಬಿಸಿದೆ.
ಮುಂದುವರಿದಿರುವ ದೇಶಗಳಲ್ಲಿಯ ಆರ್ಥಿಕ ತೊಂದರೆಗಳು ಹಣಕಾಸು ಮಾರುಕಟ್ಟೆಗಳಲ್ಲಿ ಸುರಕ್ಷತೆಯ ಬಗ್ಗೆ ಹಿಂಜರಿಕೆಯನ್ನು ಸೃಷ್ಟಿಸಬಹುದು ಮತ್ತು ಇದು ಬಂಡವಾಳ ಒಳಹರಿವಿಗೆ ಅಡ್ಡಿಯನ್ನುಂಟು ಮಾಡಬಹುದು ಎಂದೂ ವಿತ್ತ ಸಚಿವಾಲಯವು ವರದಿಯಲ್ಲಿ ಹೇಳಿದೆ.







