ಪೌಷ್ಟಿಕ ಪೌಡರ್‌ನಲ್ಲಿ ‘ಹಾನಿಕಾರಕ’ ಅಂಶಗಳಿರುವ ಆರೋಪ:ಉತ್ತರಿಸುವಂತೆ ಬೋರ್ನ್‌ವಿಟಾ ಉತ್ಪಾದಕರಿಗೆ ಎನ್ಸಿಪಿಸಿಆರ್ ಪತ್ರ
ತಪ್ಪು ಮಾಹಿತಿಯ ಜಾಹೀರಾತುಗಳನ್ನು ಕೈಬಿಡುವಂತೆ ಸೂಚನೆ

ಹೊಸದಿಲ್ಲಿ,ಎ.26 ಬಹುತೇಕವಾಗಿ ಮಕ್ಕಳು ಸೇರಿದಂತೆ ದೇಶಾದ್ಯಂತ ಕೋಟ್ಯಂತರ ಮಂದಿ ಸೇವಿಸುವ ಪೌಷ್ಟಿಕ ಹುಡಿ ಬೊರ್ನ್ವಿಟಾವು ಹಾನಿಕಾರಕ ಪದಾರ್ಥಗಳನ್ನು ಒಳಗೊಂಡಿದೆಯೆಂದು ಆರೋಪಗಳ ಬಗ್ಗೆ ಉತ್ತರಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್)ವು, ಉತ್ಪಾದಕಸಂಸ್ಥೆಯಾದ ಮೊಂಡೆಲೆಝ್ ಇಂಡಿಯಾ ಇಂಟರ್ನ್ಯಾಶನಲ್ ಗೆ ಬುಧವಾರ ಪತ್ರ ಬರೆದಿದೆ.
ಗ್ರಾಹಕರನ್ನು ತಪ್ಪುದಾರಿಗೆಳೆಯುವ ಬೊರ್ನ್ವಿಟಾದ ಜಾಹೀರಾತುಗಳು ಹಾಗೂ ಲೇಬಲ್ ಗಳನ್ನು ಪರಿಶೀಲಿಸುವಂತೆ ಮತ್ತು ಹಿಂತೆಗೆದುಕೊಳ್ಳುವಂತೆಯೂ ಅದು ಮೊಂಡೆಲೆಝ್ ಇಂಡಿಯಾಗೆ ಸಲಹೆ ನೀಡಿದೆ.
ಮೊಂಡೆಲೆಝ್ ನ ಅಂಗಸಂಸ್ಥೆಯಾದ ಕ್ಯಾಡ್ಬರಿಯ ಉತ್ಪನ್ನವಾದ ಬೊರ್ನ್ವಿಟಾವು ಸಕ್ಕರೆ ಹಾಗೂ ಕೊಕ್ಕಾದ ಘನದ್ರವ್ಯಗಳು ಹಾಗೂ ಕ್ಯಾನ್ಸರ್‌ಕಾರಕ ಕೃತಕಬಣ್ಣವನ್ನು ಒಳಗೊಂಡಿವೆಯೆಂದು ‘ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್’ ರೇವಂತ್ ಹಿಮತ್‌ಸಿಂಗ್ಕಾ ಎಂಬವರು ಪ್ರಸಾರ ಮಾಡಿದ ವಿಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಪೌಷ್ಟಿಕತಜ್ಞ ಹಾಗೂ ಆರೋಗ್ಯ ತರಬೇತುದಾರ ಎಂಬುದಾಗಿ ತನ್ನನ್ನು ಪರಿಚಯಿಸಿಕೊಂಡಿರುವ ರೇವಂತ್ ಅವರು ಮೊಂಡೆಲೆಝ್ ಇಂಡಿಯಾ ತನಗೆ ಕಾನೂನುನೋಟಿಸ್ ಜಾರಿಗೊಳಿಸಿದ ಬಳಿಕ ವಿವಾದಾತ್ಮಕ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಿಂದ ತೆಗೆದುಹಾಕಿದ್ದರು. ಆವಾಗಿನಿಂದ ಈ ವಿಡಿಯೋ ಕ್ಲಿಪ್ ದೇಶಾದ್ಯಂತ ಭಾರೀ ವಿವಾದವನ್ನು ಸೃಷ್ಟಿಸಿದೆ ಹಾಗೂ ಪೋಷಕರ ಆತಂಕಕ್ಕೆ ಕಾರಣವಾಗಿದೆ. ಆದರೆ ಈ ಆರೋಪಗಳನ್ನು ಮೊಂಡೆಲೆಝ್ ಕಂಪೆನಿಯು ಅಲ್ಲಗಳೆದಿದೆ.
‘‘ನಿಮ್ಮ ಉತ್ಪನ್ನವು ಅಧಿಕ ಶೇಕಡವಾರು ಪ್ರಮಾಣದ ಸಕ್ಕರೆ ಹಾಗೂ ಮಕ್ಕಳ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮವನ್ನು ಬೀರಬಹುದಾದಂತಹ ಅಂಶಗಳು, ಪದಾರ್ಥಗಳು, ಮಿಶ್ರಣಗಳು, ಸಂಯೋಜಕ (ಫಾರ್ಮುಲಾ)ಗಳನ್ನು ಹೊಂದಿದೆಯೆಂಬುದು ಆಯೋಗದ ಗಮನಕ್ಕೆ ಬಂದಿದೆ’’ ಎಂದು ಎನ್ಸಿಪಿಸಿಆರ್, ಮೊಂಡೆಲೆಝ್ ಇಂಟರ್ನ್ಯಾಶನಲ್ ಇಂಡಿಯಾದ ಅಧ್ಯಕ್ಷ ದೀಪಕ್ ಅಯ್ಯರ್ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ತಿಳಿಸಿದೆ.
ಭಾರತೀಯ ಆಹಾರ ಸುರಕ್ಷತಾ ಮಾನದಂಡ ಪ್ರಾಧಿಕಾರ (ಎಫ್ಎಸ್ಎಸ್ಎಐ) ಹಾಗೂ ಗ್ರಾಹಕ ರಕ್ಷಣಾ ಕಾಯ್ದೆಯ ಮಾರ್ಗದರ್ಶಿ ಸೂತ್ರಗಳು ಹಾಗೂ ನಿಯಮಾವಳಿಗಳ ಪ್ರಕಾರ ಕಡ್ಡಾಯವಾಗಿರುವ ಉತ್ಪನ್ನದಲ್ಲಿರುವ ಅಂಶಗಳ ವಿವರಗಳನ್ನು ಪ್ರದರ್ಶಿಸುವಲ್ಲಿ ವಿಫಲವಾಗಿದೆ ಎಂದು ಮಕ್ಕಳ ಹಕ್ಕುಗಳ ಆಯೋಗವು ಪತ್ರದಲ್ಲಿ ತಿಳಿಸಿದೆ.ತನ್ನ ಈ ಪತ್ರಕ್ಕೆ ಒಂದು ವಾರದೊಳಗೆ ಉತ್ತರಿಸುವಂತೆಯೂ ಅದು ಕಂಪೆನಿಗೆ ಸೂಚಿಸಿದೆ.







