ಚಂದಿರನ ಮೇಲ್ಮೈಗೆ ಅಪ್ಪಳಿಸಿದ ಜಪಾನ್ ನ ಬಾಹ್ಯಾಕಾಶ ನೌಕೆ

ಟೋಕಿಯೊ, ಎ.26: ಜಪಾನ್ ನ ಖಾಸಗಿ ಕಂಪೆನಿ ಐಸ್ಪೇಸ್ ನ ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈಯಲ್ಲಿ ಇಳಿಯುತ್ತಿದ್ದಂತೆಯೇ ಸಂಪರ್ಕ ಕಳೆದುಕೊಂಡಿದ್ದು ನೌಕೆಯು ಚಂದ್ರನ ಮೇಲ್ಮೈಯಲ್ಲಿ ಅಪಘಾತಕ್ಕೊಳಗಾಗಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಮಾನವರಹಿತ ಬಾಹ್ಯಾಕಾಶ ನೌಕೆ ಹಕುಟೊ-ಆರ್ ಮಂಗಳವಾರ ತಡರಾತ್ರಿ ಚಂದಿರನ ಮೇಲ್ಮೈಯನ್ನು ತಲುಪಬೇಕಿತ್ತು. ಆದರೆ ಮೇಲ್ಮೈಯಲ್ಲಿ ಲ್ಯಾಂಡ್ ಆದ ಸುಮಾರು 25 ನಿಮಿಷದ ಬಳಿಕ ಸಂಪರ್ಕ ಕಳೆದುಕೊಂಡಿದೆ. ಯೋಜನೆ ವಿಫಲವಾಗಿದೆ. ಆದರೆ ಮತ್ತೆ ಹೊಸ ಯೋಜನೆಯೊಂದಿಗೆ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಜಪಾನ್ನ ನವೋದ್ಯಮ ಸಂಸ್ಥೆ ಐಸ್ಪೇಸ್ ಘೋಷಿಸಿದೆ.
ಬಾಹ್ಯಾಕಾಶ ನೌಕೆಯು ಚಂದಿರನ ಮೇಲ್ಮೈಯಲ್ಲಿ ಪತನಗೊಂಡಿರುವ ಎಲ್ಲಾ ಸಾಧ್ಯತೆಗಳಿವೆ. ನೌಕೆಯೊಂದಿಗೆ ಮರುಸಂಪರ್ಕ ಸಾಧಿಸುವ ಎಲ್ಲಾ ಪ್ರಯತ್ನಗಳೂ ವಿಫಲವಾಗಿದೆ. ಲ್ಯಾಂಡಿಂಗ್ ಏಕೆ ವಿಫಲವಾಗಿದೆ ಎಂಬುದನ್ನು ನಮ್ಮ ಇಂಜಿನಿಯರ್ಗಳು ಪರಿಶೀಲಿಸುತ್ತಿದ್ದಾರೆ. ಈ ಬಾರಿಯ ಯೋಜನೆ ವಿಫಲಗೊಂಡಿದ್ದರೂ ಈಗಾಗಲೇ ಪ್ರಗತಿಯಲ್ಲಿರುವ ಮುಂದಿನ 2 ಯೋಜನೆಗಳು ಪೂರ್ವನಿಗದಿಯಂತೆ ಮುಂದುವರಿಯಲಿದೆ ಎಂದು ಸಂಸ್ಥೆಯ ಮೂಲಗಳು ಹೇಳಿವೆ.
ಸುಮಾರು 6.5 ಅಡಿ ಉದ್ದ, 340 ಕಿ.ಗ್ರಾಂ ತೂಕದ ಈ ಬಾಹ್ಯಾಕಾಶ ನೌಕೆ ಕಳೆದ ತಿಂಗಳು ಚಂದಿರನ ಕಕ್ಷೆಯನ್ನು ಪ್ರವೇಶಿಸಿತ್ತು. ಇದುವರೆಗೆ ಚಂದಿರನ ಮೇಲ್ಮೈಯಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸುವಲ್ಲಿ ಅಮೆರಿಕ, ರಶ್ಯ ಮತ್ತು ಚೀನಾ ಮಾತ್ರ ಯಶಸ್ವಿಯಾಗಿವೆ.