ರಾಜಸ್ಥಾನ: ಮೀಸಲಾತಿಗಾಗಿ ಪ್ರತಿಭಟಿಸುತ್ತಿದ್ದ ವ್ಯಕ್ತಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ

ಜೈಪುರ,ಎ.26: ರಾಜಸ್ಥಾನದ ಭರತಪುರದಲ್ಲಿ ಮೀಸಲಾತಿಯನ್ನು ಆಗ್ರಹಿಸಿ ನಾಲ್ಕು ಸಮುದಾಯಗಳು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ 48ರ ಹರೆಯದ ವ್ಯಕ್ತಿಯೋರ್ವನ ಶವವು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು,ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಪ್ರತ್ಯೇಕ ಮೀಸಲಾತಿಗಾಗಿ ಆಗ್ರಹಿಸುತ್ತಿರುವ
ಸೈನಿ,ಮಾಲಿ,ಮೌರ್ಯ ಮತ್ತು ಕುಶ್ವಾಹ ಸಮುದಾಯಗಳ ಸದಸ್ಯರು ಜೈಪುರ -ಆಗ್ರಾ ರಾಷ್ಟ್ರಿಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಬೇಡಿಕೆಗಳನ್ನು ಪರಿಶೀಲಿಸಲು ರಾಜಸ್ಥಾನ ಸರಕಾರವು ಒಪ್ಪಿಕೊಂಡಿದ್ದರೂ ಮಣಿಯಲು ಪ್ರತಿಭಟನಾಕಾರರು ನಿರಾಕರಿಸಿದ್ದಾರೆ.
ಮೀಸಲಾತಿ ಬೇಡಿಕೆಯನ್ನು ಸರಕಾರವು ಒಪ್ಪಿಕೊಳ್ಳದ್ದರಿಂದ ಮೃತವ್ಯಕ್ತಿ ಸೈನಿ ಅಸಮಾಧಾನಗೊಂಡಿದ್ದ ಎಂದು ಆತನ ಕುಟುಂಬವು ತಿಳಿಸಿದೆ.
‘ಸಮುದಾಯಕ್ಕೆ ಮೀಸಲಾತಿ ದೊರೆಯುವವರೆಗೆ ತಾನು ಮರಳುವುದಿಲ್ಲ ಎಂದು ನನ್ನ ತಂದೆ ಹೇಳಿದ್ದರು. ಅವರು ಸಮುದಾಯಕ್ಕಾಗಿ ಸಾವನ್ನಪ್ಪಿದ್ದಾರೆ ’ ಎಂದು ಸೈನಿಯ ಪುತ್ರ ನೀರಜ್ ಸುದ್ದಿಗಾರರಿಗೆ ತಿಳಿಸಿದ.
ಈ ಬಗ್ಗೆ ತಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಸಾವಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಮೃತದೇಹದ ಬಳಿ ಆತ್ಮಹತ್ಯೆ ಚೀಟಿ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.







