ರಾಹುಲ್, ಪ್ರಿಯಾಂಕಾ ಗಾಂಧಿ ಪ್ರಚಾರಕ್ಕೆ ಬಂದಷ್ಟು ನಮಗೆ ಲಾಭ: ಮುಖ್ಯಮಂತ್ರಿ ಬೊಮ್ಮಾಯಿ

ಬೆಳಗಾವಿ, ಎ.26: ‘ಪ್ರಧಾನಿ ಮೋದಿ, ಅಮಿತ್ ಶಾ ಅವರು ಯಾಕೆ ಬರುತ್ತಿದ್ದಾರೆಂದು ಕಾಂಗ್ರೆಸ್ ನವರು ಕೇಳುತ್ತಾರೆ. ಆದರೆ, ರಾಹುಲ್, ಪ್ರಿಯಾಂಕಾ ಇಲ್ಲಿ ಬಂದಿದ್ದಾರೆ. ರಾಹುಲ್, ಪ್ರಿಯಾಂಕಾ ಬಂದಷ್ಟು ನಮಗೆ ಅನುಕೂಲ. ಅವರು ಹೋದಲ್ಲಿ ಕಾಂಗ್ರೆಸ್ ಸೋತಿದೆ. ಅವರು ಬಂದಷ್ಟು ನಮಗೆ ಲಾಭವಾಗಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ಜಿಲ್ಲೆಯ ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹಂದ್ರಿ ಪರ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಅವರು, ಈ ಬಾರಿ ಚುನಾವಣೆ ಐತಿಹಾಸಿಕವಾಗಿದೆ. ಪ್ರಧಾನಿ ಮೋದಿ ನೇತೃತ್ವದ ಡಬಲ್ ಎಂಜಿನ್ ಸರಕಾರ ದೇಶದ ಅಭಿವೃದ್ಧಿ ಮಾಡುತ್ತಿದೆ. ಯಾರಿಗೆ ಕರ್ನಾಟಕದ ಅಭಿವೃದ್ಧಿ ಬೇಕಿದೆ ಅವರು ಡಬಲ್ ಎಂಜಿನ್ ಸರಕಾರ ಬೆಂಬಲಿಸುತ್ತಾರೆ ಎಂದರು.
ಡಬಲ್ ಎಂಜಿನ್ ಸರಕಾರ ಬೇಡ ಅನ್ನುವವರು ಕಾಂಗ್ರೆಸ್ ಗೆ ಮತ ಹಾಕಲಿ. ಡಬಲ್ ಎಂಜಿನ್ ಸರಕಾರ ಇರುವುದರಿಂದ ರಾಜ್ಯದಲ್ಲಿ 60 ಸಾವಿರ ಕೋಟಿ ರೂ.ವೆಚ್ಚದಲ್ಲಿ 6 ಸಾವಿರ ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದೆ. ಬೆಳಗಾವಿ ಕುಡಚಿ ರೈಲ್ವೆ ಲೈನ್ ಡಬಲ್ ಮಾಡಲಾಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆ ಎಲ್ಲವೂ ಡಬಲ್ ಎಂಜಿನ್ ಸರಕಾರದಿಂದ ಸಾಧ್ಯವಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ , ಭ್ರಷ್ಟಾಚಾರ ಅಂದರೆ ಕಾಂಗ್ರೆಸ್. ಬಿಡಿಎ, ಹಾಸಿಗೆ ದಿಂಬಿನಲ್ಲೂ ಲಂಚ ಪಡೆದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯೆ ಶೇ.85ರಷ್ಟು ಭ್ರಷ್ಟಾಚಾರ ನಡೆಯುತ್ತಿದ್ದ ಬಗ್ಗೆ ಹೇಳಿದ್ದರು. ನಾವು ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. 2016ರಲ್ಲಿ ಸಿದ್ದರಾಮಯ್ಯ ಆಂತರಿಕ ಮೀಸಲಾತಿ ನೀಡಲಾಗದೆ ಓಡಿ ಹೋಗಿದ್ದರು. ನಾವು ಆಂತರಿಕ ಮೀಸಲಾತಿ ನೀಡಿದ್ದೇವೆ. ಮುಸ್ಲಿಂ ಸಮುದಾಯದಲ್ಲಿ ಅನೇಕ ಉಪ ಪಂಗಡಗಳಿವೆ. ಅವರಿಗೆ ಆರ್ಥಿಕ ಹಿಂದುಳಿದ ವರ್ಗದಡಿ ಮೀಸಲಾತಿ ಇದೆ ಎಂದು ಅವರು ತಿಳಿಸಿದರು.







