ಜೈಲು ನಿಯಮ ಬದಲಾವಣೆ: ಬಿಹಾರದ ಮಾಜಿ ಸಂಸದ ಆನಂದ್ ಮೋಹನ್ ಸಿಂಗ್ ಜೈಲಿನಿಂದ ಬಿಡುಗಡೆ

ಪಾಟ್ನಾ: ಬಿಹಾರದ ಮಾಜಿ ಸಂಸದ ಆನಂದ್ ಮೋಹನ್ ಸಿಂಗ್ ಗುರುವಾರ ಮುಂಜಾನೆ ಜೈಲಿನಿಂದ ಬಿಡುಗಡೆಯಾದರು.
ಬಿಹಾರ ಸರಕಾರದ ಜೈಲು ನಿಯಮ ಬದಲಾವಣೆಯ ಮಾಡಿದ ಕಾರಣ ಸಿಂಗ್ ಅವರ ಬಿಡುಗಡೆ ಹಾದಿ ಸುಗಮವಾಗಿದೆ. ಸರಕಾರದ ಈ ನಿಯಮವು ಭಾರೀ ಗದ್ದಲಕ್ಕೆ ಕಾರಣವಾಗಿದೆ.
1994ರಲ್ಲಿ ಐಎಎಸ್ ಅಧಿಕಾರಿಯೊಬ್ಬರ ಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ 15 ವರ್ಷ ಜೈಲು ವಾಸ ಅನುಭವಿಸಿರುವ ಸಿಂಗ್ ಈಗ ಎಲ್ಲಿಗೆ ಹೋಗಿದ್ದಾರೆಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅವರ ಪುತ್ರ ಹಾಗೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಶಾಸಕ ಚೇತನ್ ಆನಂದ್ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ ಮತ್ತು ಸಹರ್ಸಾದಲ್ಲಿರುವ ಅವರ ಕುಟುಂಬದ ಮನೆಗೆ ಬೀಗ ಹಾಕಲಾಗಿದೆ.
ಸಿಂಗ್ ರನ್ನು ಆರಂಭದಲ್ಲಿ ಬೆಳಿಗ್ಗೆ 7 ಗಂಟೆಗೆ ಬಿಡುಗಡೆ ಮಾಡಬೇಕಿತ್ತು. ಆದರೆ ಮಾಧ್ಯಮದವರನ್ನು ತಪ್ಪಿಸಲು ಏಕಾಏಕಿ ಯೋಜನೆಯನ್ನು ಬದಲಾಯಿಸಲಾಗಿದೆ ಎಂದು ವರದಿಯಾಗಿದೆ.
ಮಗನ ಮದುವೆಗಾಗಿ ಸಿಂಗ್ 15 ದಿನಗಳ ಪೆರೋಲ್ ಮೇಲೆ ಹೊರಗಿದ್ದರು. ವಿರಾಮದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು. ನಿನ್ನೆಯಷ್ಟೇ ಅವರು ಜೈಲಿಗೆ ಮರಳಿದ್ದರು.
ಬಿಹಾರದ ನಿತೀಶ್ ಕುಮಾರ್ ಸರಕಾರ ಜೈಲು ನಿಯಮಗಳನ್ನು ಪರಿಷ್ಕರಿಸಿದ ನಂತರ ಮಾಜಿ ಸಂಸದ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಹಿಂದಿನ ನಿಯಮದ ಪ್ರಕಾರ, ಕರ್ತವ್ಯದಲ್ಲಿದ್ದ ಸಾರ್ವಜನಿಕ ನೌಕರನ ಹತ್ಯೆಗೆ ಸಂಬಂಧಿಸಿದಂತೆ ಶಿಕ್ಷೆಗೊಳಗಾದ ಯಾರಾದರೂ ಶಿಕ್ಷೆಯ ವಿನಾಯಿತಿಗೆ ಅರ್ಹರಾಗಿರಲಿಲ್ಲ. ಇದನ್ನು ಬಿಹಾರ ಸರಕಾರ ಬದಲಾಯಿಸಿದ್ದು, 14 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದ ಸಿಂಗ್ ಸೇರಿದಂತೆ 27 ಅಪರಾಧಿಗಳ ಬಿಡುಗಡೆಗೆ ದಾರಿ ಮಾಡಿಕೊಟ್ಟಿತು.
ಈ ನಡೆ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ನಿತೀಶ್ ಕುಮಾರ್ ಸರಕಾರ ವಿರುದ್ಧ ಪ್ರತಿಪಕ್ಷ ಬಿಜೆಪಿ ಕಿಡಿಕಾರಿದೆ. ಮಿತ್ರಪಕ್ಷ ಆರ್‌ಜೆಡಿ ಬೆಂಬಲದೊಂದಿಗೆ ಅಧಿಕಾರದಲ್ಲಿ ಉಳಿಯಲು ನಿತೀಶ್ ಕುಮಾರ್ ಕಾನೂನನ್ನು ತ್ಯಾಗ ಮಾಡಿದ್ದಾರೆ ಎಂದು ಬಿಜೆಪಿಯ ಸಂಸದ, ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಆರ್‌ಜೆಡಿಯನ್ನು ಪ್ರತಿನಿಧಿಸಿದ್ದ ಸಿಂಗ್ ಅವರನ್ನು ಪ್ರಮುಖ ರಜಪೂತ ನಾಯಕನೆಂದು ಪರಿಗಣಿಸಲಾಗಿದೆ. ಅವರ ಬಿಡುಗಡೆಯು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ ಮೇಲ್ವರ್ಗದ ಮತಗಳನ್ನು ಸೆಳೆಯುವ ಕ್ರಮವೆಂದು ಪರಿಗಣಿಸಲಾಗಿದೆ.







