ಬೆಂಗಳೂರು | 25 ಸಾವಿರಕ್ಕೆ ಮತದಾರರ ವೈಯಕ್ತಿಕ ಮಾಹಿತಿ ಮಾರಾಟ: ಖಾಸಗಿ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲು

ಬೆಂಗಳೂರು: ಆರುವರೆ ಲಕ್ಷಕ್ಕೂ ಅಧಿಕ ಮತದಾರರ ವೈಯಕ್ತಿಕ ಮಾಹಿತಿ ಮಾರಾಟ ಮಾಡಿರುವ ಆರೋಪದ ಮೇಲೆ ಬೆಂಗಳೂರು ಮೂಲದ ಖಾಸಗಿ ಕಂಪೆನಿಯೊಂದರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಆಗ್ನೇಯ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೋರಮಂಗಲ ಮೂಲದ ಕಂಪೆನಿಯ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಸಂಸ್ಥೆಯ ಹೆಸರನ್ನು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ.
ಮತದಾರರ ಮಾಹಿತಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆಂದು ಚುನಾವಣಾ ಅಧಿಕಾರಿಗಳು ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕಂಪೆನಿಯು ತನ್ನ ವೆಬ್‌ಸೈಟ್‌ನಲ್ಲಿ ಮತದಾರರ ಮೊಬೈಲ್ ಸಂಖ್ಯೆಗಳು ಮತ್ತು ವಾಟ್ಸಾಪ್ ಸಂಖ್ಯೆಗಳು ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಹೊಂದಿದೆ ಎಂದು ಬಹಿರಂಗವಾಗಿ ಜಾಹೀರಾತು ನೀಡಿದ್ದು, 25,000 ರೂಪಾಯಿಗಳನ್ನು ಪಾವತಿಸಿದರೆ ಲಾಗಿನ್ ಐಡಿ ಕೊಡುವುದಾಗಿ ಆಮಿಷ ಒಡ್ಡಿದೆ ಎಂದು thenewsminute.com ವರದಿ ಮಾಡಿದೆ.
ಪಕ್ಷೇತರ ಅಭ್ಯರ್ಥಿ ರಾಜು ಅವರು ದತ್ತಾಂಶ ಮಾರಾಟದ ಬಗ್ಗೆ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಹಗರಣ ಬೆಳಕಿಗೆ ಬಂದಿದೆ.
ಕಳೆದ ವರ್ಷ ಚಿಲುಮೆ ಸಂಸ್ಥೆಯು ಮತದಾರರ ದತ್ತಾಂಶವನ್ನು ಅಕ್ರಮವಾಗಿ ಸಂಗ್ರಹಿಸಿದೆ ಎಂಬ ಆರೋಪವು ಕೇಳಿ ಬಂದಿತ್ತು. ಚಿಲುಮೆ ಸಂಸ್ಥೆಯ ಸಿಬ್ಬಂದಿಗಳು ಬಿಬಿಎಂಪಿ ಅಧಿಕಾರಿಗಳಂತೆ ಬಿಂಬಿಸಿ ಮತದಾರರ ದತ್ತಾಂಶವನ್ನು ಸಂಗ್ರಹಿಸಿದ್ದರು ಎಂದು thenewsminute.com ಹಾಗೂ ಕನ್ನಡ ವೆಬ್ ತಾಣ 'ಪ್ರತಿಧ್ವನಿ' ಜಂಟಿ ತನಿಖಾ ವರದಿ ನಡೆಸಿತ್ತು.







