ಹಕ್ಕಿಪಿಕ್ಕಿ: ಕರ್ನಾಟಕದ ಜಾಗತಿಕ ಅಲೆಮಾರಿಗಳು

ಅಂತರ್ಯುದ್ಧ ತಲೆದೋರಿರುವ ಸುಡಾನ್ನಲ್ಲಿ 300ಕ್ಕೂ ಹೆಚ್ಚು ಹಕ್ಕಿಪಿಕ್ಕಿಗಳು ಸಿಕ್ಕಿಹಾಕಿಕೊಂಡಿರಬಹುದು. ನಿಖರವಾಗಿ ಎಷ್ಟು ಜನರೆಂದು ಹೇಳುವುದು ಕಷ್ಟ. ಅವರು ದೇಶದ ವಿವಿಧೆಡೆಗಳಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಒಂದು ಗುಂಪಿನಿಂದ ಇನ್ನೊಂದು ಗುಂಪು ಬೇರೆಯಾಗಿದೆ. ಏನಾದೀತೊ ಎಂಬ ಆತಂಕದಲ್ಲಿಯೇ ಪ್ರತಿದಿನವನ್ನೂ ದೂಡುವಂತಾಗಿದೆ. ಹಕ್ಕಿಪಿಕ್ಕಿ ಜನರ ಈ ಪರಿಸ್ಥಿತಿ, ಪ್ರಪಂಚದ ದೂರದ ಮೂಲೆಗಳಿಗೆ ಪ್ರಯಾಣಿಸುವ ಆ ಸಮುದಾಯದ ಬಗ್ಗೆ ದೇಶದ ಗಮನ ಹರಿಯುವಂತೆ ಮಾಡಿದೆ.
ಅವರು, ದಾವಣಗೆರೆಯ ಚನ್ನಗಿರಿ ತಾಲೂಕಿನ ಗೋಪನಹಾಳ್ ಗ್ರಾಮದ ಹಕ್ಕಿಪಿಕ್ಕಿ ಜನಾಂಗದ 36 ವರ್ಷದ ಪ್ರಭು ಎಸ್. 10 ತಿಂಗಳ ಹಿಂದೆ ಗಿಡಮೂಲಿಕೆ ಉತ್ಪನ್ನ ಮಾರಲು ಪತ್ನಿಯೊಂದಿಗೆ ಸುಡಾನ್ಗೆ ತೆರಳಿದ್ದರು. ಕಳೆದ ವರ್ಷವೆಲ್ಲ ಈ ದಂಪತಿ ಮತ್ತು ಅವರ ಬುಡಕಟ್ಟಿನ ಇತರರು ಸುಡಾನ್ನಾದ್ಯಂತ ತಮ್ಮ ಸರಕು ಮಾರಾಟಕ್ಕಾಗಿ ಪ್ರಯಾಣಿಸಿದ್ದರು. ಅವರ ಮೂಲಿಕೆ ಉತ್ಪನ್ನಗಳಾದ ಹೇರ್ ಆಯಿಲ್, ಮಸಾಜ್ ಆಯಿಲ್ ಮತ್ತು ಮುಲಾಮುಗಳಿಗೆ, ವೈದ್ಯರು ಸಿಗುವುದೇ ಕಷ್ಟವಿರುವ ಆ ಬಡ ದೇಶದಲ್ಲಿ ಹೆಚ್ಚು ಬೇಡಿಕೆ.
ಆದರೆ ಈ ಸಲದ ಪ್ರಯಾಣ ಅವರನ್ನು ಕಷ್ಟದಲ್ಲಿ ಸಿಲುಕಿಸಿದೆ. ಅಲ್ಲಿ ಭುಗಿಲೆದ್ದಿರುವ ಅಂತರ್ಕಲಹದ ನಡುವೆ ಸುಡಾನ್ನಲ್ಲಿ ಈ ಬುಡಕಟ್ಟು ಜನಾಂಗದ ಹಲವರು ಸಿಕ್ಕಿಹಾಕಿಕೊಂಡಿದ್ದಾರೆ. ವಾಟ್ಸ್ಆ್ಯಪ್ ಕರೆ ಮೂಲಕ ಫ್ರಂಟ್ಲೈನ್ನೊಂದಿಗೆ ಮಾತನಾಡಿದ ಪ್ರಭು, ‘‘ನಾವು ಉರಿಯುತ್ತಿರುವ ಮರುಭೂಮಿಯ ಮಧ್ಯೆ ಸಿಲುಕಿದ್ದೇವೆ. ಈ ಮನೆಯಲ್ಲಿ ಹಕ್ಕಿಪಿಕ್ಕಿ ಜನಾಂಗದ 33 ಜನರಿದ್ದೇವೆ. ವಿದ್ಯುತ್ ಸಂಪರ್ಕವಿಲ್ಲ, ಎಲ್ಲವೂ ಜನರೇಟರ್ನಲ್ಲಿ ನಡೆಯುತ್ತಿದೆ. ಜನರೇಟರ್ಗೆ ಇಂಧನ ಖರೀದಿಸಲು ಹಣವಿಲ್ಲದೆ ಪರದಾಡಿದ್ದೇವೆ. ನಿರಂತರ ಬ್ಲಾಸ್ಟಿಂಗ್ ಮತ್ತು ಶೆಲ್ ದಾಳಿಯಿಂದಾಗಿ ದಿನಸಿ ವಸ್ತು ಖರೀದಿಸುವುದಕ್ಕೂ ಆಗುತ್ತಿಲ್ಲ. ನಮ್ಮ ಮನೆಗೆ ಯಾವಾಗ ಬಾಂಬ್ ಬೀಳುತ್ತದೋ ಗೊತ್ತಿಲ್ಲ’’ ಎಂದಿದ್ದಾರೆ.

ಹಕ್ಕಿಪಿಕ್ಕಿ ಸಮುದಾಯದ ಸುಧಾ ಮತ್ತು ಚಿತ್ರಮ್ಮ
ಅಲ್ಲಿ ಸಿಲುಕಿರುವವರಲ್ಲಿ ಐವರು ದಾವಣಗೆರೆ ಜಿಲ್ಲೆಯವರು ಮತ್ತು ಏಳು ಮಂದಿ ಶಿವಮೊಗ್ಗದವರು. ಉಳಿದವರು ಮೈಸೂರು ಜಿಲ್ಲೆಯ ಹುಣಸೂರಿನವರು. ‘‘ನಮ್ಮ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ನಮಗೆ ಭರವಸೆ ನೀಡುತ್ತಲೇ ಇದ್ದಾರೆ. ಆದರೆ ಇಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ನಾವು ಯಾವುದೇ ಹಂತದಲ್ಲೂ ಸಾಯಬಹುದು. ದಯವಿಟ್ಟು ಇಲ್ಲಿಂದ ಆಚೆ ಬರಲು ನಮಗೆ ಸಹಾಯ ಮಾಡಿ’’ ಎಂಬುದು ಅವರ ಕೋರಿಕೆ. ಅಲ್ಲಿನ ಪೊಲೀಸ್ ನೆರವು ಕೇಳುವುದಕ್ಕೂ ಅವರಿಗೆ ಭಯ. ಯಾಕೆಂದರೆ ಅವರು ಸಂಘರ್ಷದಲ್ಲಿ ತೊಡಗಿರುವ ಎರಡು ಗುಂಪುಗಳಲ್ಲಿ ಯಾರ ಕಡೆಯವರು ಎಂಬುದೂ ಗೊತ್ತಿಲ್ಲ.
ಶಿವಮೊಗ್ಗದಲ್ಲಿ ನೆಲೆಸಿರುವ ಹಕ್ಕಿಪಿಕ್ಕಿ ಆದಿವಾಸಿ ಮಹಿಳೆ ಕುಮುದಾ ಸುಶೀಲ್ ಅವರಿಗೆ, ಬುಡಕಟ್ಟಿನ ಇತರ 11 ಮಂದಿಯೊಡನೆ ಸುಡಾನ್ನ ರಾಜಧಾನಿ ಖಾರ್ಟೂಮ್ನಲ್ಲಿ ಸಿಲುಕಿಕೊಂಡಿರುವ 25 ವರ್ಷದ ತಮ್ಮ ಮಗಳು ರಾಜೇಶ್ವರಿ ಅಬ್ರಾಮ್ ಮತ್ತು ಆಕೆಯ ಪತಿಯ ಬಗ್ಗೆ ಚಿಂತೆಯಾಗಿದೆ. ‘‘ಆಕೆ ಗಂಡನೊಂದಿಗೆ ಸುಡಾನ್ಗೆ ಹೋದಳು. ಬೆಂಗಳೂರು ಅಥವಾ ದಿಲ್ಲಿ ವಿಮಾನ ನಿಲ್ದಾಣಗಳಲ್ಲಿ ಇಂಥ ಯಾವುದರ ಬಗ್ಗೆಯೂ ಸೂಚನೆಯಿರಲಿಲ್ಲ. ಈಗ ಅವರಿಗೆ ಮನೆಯಿಂದ ಹೊರಬರಲು ಸಾಧ್ಯವಿಲ್ಲದ ಸ್ಥಿತಿ. ಏನಾದರೂ ಆದರೆ ಆಸ್ಪತ್ರೆಗೆ ಹೋಗುವುದಕ್ಕೂ ಸಾಧ್ಯವಿಲ್ಲ. ಮನೆಯೊಳಗೆ ಬಿದ್ದ ಬುಲೆಟ್ ಕೇಸಿಂಗ್ಗಳನ್ನು ಮಗಳು ನನಗೆ ತೋರಿಸಿದಳು. ಅವಳು ಸುರಕ್ಷಿತವಾಗಿ ಮನೆಗೆ ಹಿಂದಿರುಗಿದರೆ ಸಾಕು’’ ಎಂದು ಕಾಯುತ್ತಿದ್ದಾರೆ.
ಅಂತರ್ಯುದ್ಧ ತಲೆದೋರಿರುವ ಸುಡಾನ್ನಲ್ಲಿ 300ಕ್ಕೂ ಹೆಚ್ಚು ಹಕ್ಕಿಪಿಕ್ಕಿಗಳು ಸಿಕ್ಕಿಹಾಕಿಕೊಂಡಿರಬಹುದು. ನಿಖರವಾಗಿ ಎಷ್ಟು ಜನರೆಂದು ಹೇಳುವುದು ಕಷ್ಟ. ಅವರು ದೇಶದ ವಿವಿಧೆಡೆಗಳಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಒಂದು ಗುಂಪಿನಿಂದ ಇನ್ನೊಂದು ಗುಂಪು ಬೇರೆಯಾಗಿದೆ. ಏನಾದೀತೊ ಎಂಬ ಆತಂಕದಲ್ಲಿಯೇ ಪ್ರತಿದಿನವನ್ನೂ ದೂಡುವಂತಾಗಿದೆ. ಹಕ್ಕಿಪಿಕ್ಕಿ ಜನರ ಈ ಪರಿಸ್ಥಿತಿ, ಪ್ರಪಂಚದ ದೂರದ ಮೂಲೆಗಳಿಗೆ ಪ್ರಯಾಣಿಸುವ ಆ ಸಮುದಾಯದ ಬಗ್ಗೆ ದೇಶದ ಗಮನ ಹರಿಯುವಂತೆ ಮಾಡಿದೆ.
2011ರ ಜನಗಣತಿಯ ಪ್ರಕಾರ, ಕರ್ನಾಟಕದಲ್ಲಿ 11,892 ಹಕ್ಕಿಪಿಕ್ಕಿ ಬುಡಕಟ್ಟು ಜನರಿದ್ದರು. ಬಹುಪಾಲು ಜನರ ವಾಸ ಗ್ರಾಮೀಣ ಭಾಗಗಳಲ್ಲಿ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಹೆಚ್ಚಿನವರು ನೆಲೆಸಿದ್ದಾರೆ. ಹಾಸನ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ತುಮಕೂರು, ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿಯೂ ಕಾಣಬಹುದು. ಈ ಜನಾಂಗದ ವಿಶ್ವಪರ್ಯಟನೆ ಬಗ್ಗೆ ತಿಳಿಯಲು ರಾಮನಗರ ಮತ್ತು ಬೆಂಗಳೂರಿನ ಅಂಥ ಎರಡು ನೆಲೆಗಳಿಗೆ ಹೋದಾಗ ಕಂಡದ್ದಿಷ್ಟು.
ರಾಮನಗರ ಜಿಲ್ಲೆಯ ಬಿಡದಿ ತಾಲೂಕಿನ ವಂಡರ್ಲಾ ಪ್ರವೇಶದ್ವಾರದ ಎದುರು, ಹಕ್ಕಿಪಿಕ್ಕಿ ಕಾಲನಿ ಗೌರಿಪುರಕ್ಕೆ ದಾರಿಯಿದೆ. ಅಲ್ಲಿ 69 ವರ್ಷದ ರಾಮಕೃಷ್ಣ ಎಂಬವರು ಹೇಳುವಂತೆ, ಹಕ್ಕಿಪಿಕ್ಕಿಗಳು ಮೂಲತಃ ಅಲೆಮಾರಿ ಬುಡಕಟ್ಟಿನವರು. ದೇಶಾದ್ಯಂತ ಕಾಡುಗಳಿಗೆ ತೆರಳಿ ಹಕ್ಕಿಗಳನ್ನು ಬೇಟೆಯಾಡುತ್ತಿದ್ದರು. ಹೀಗಾಗಿ, ಕರ್ನಾಟಕದಲ್ಲಿ ಹಕ್ಕಿಪಿಕ್ಕಿಗಳು ಎಂದು ಅವರಿಗೆ ಹೆಸರು. ತಮಿಳುನಾಡಿನಲ್ಲಿ ಇದೇ ಬುಡಕಟ್ಟಿನವರನ್ನು ನಾರಿ ಕುರವರ್, ಗುಜರಾತ್ನಲ್ಲಿ ವಘರಿ, ಮಹಾರಾಷ್ಟ್ರದಲ್ಲಿ ಪಾರ್ಧಿ ಎಂದು ಕರೆಯಲಾಗುತ್ತದೆ. ಸಮುದಾಯದೊಳಗೇ ವಿವಾಹವಾಗುವ ಜನಾಂಗವಿದು. ವಾಗ್ರಿ ಬೂಲಿ ಎಂಬ ಭಾಷೆ ಮಾತನಾಡುತ್ತಾರೆ. ಭಾಷಾಶಾಸ್ತ್ರಜ್ಞರ ಪ್ರಕಾರ ಇದು ಇಂಡೋ ಆರ್ಯನ್ ಭಾಷೆ.
ಸಮುದಾಯದ ಮೌಖಿಕ ಇತಿಹಾಸ ಗಮನಿಸಿದರೆ, ಅವರ ಭೌಗೋಳಿಕ ಮೂಲ ಭಾರತದ ವಾಯವ್ಯ. ಅಲ್ಲಿ ಈ ಜನಾಂಗದವರು ಮೇವಾರ್ನ 16ನೇ ಶತಮಾನದ ರಜಪೂತ ರಾಜ ಮಹಾರಾಣಾ ಪ್ರತಾಪನ ಸೈನ್ಯದ ಭಾಗವಾಗಿದ್ದರು. ಆತನ ಸೋಲಿನ ನಂತರ, ಈ ಸಮುದಾಯ ಭಾರತದಾದ್ಯಂತ ಚದುರಿಹೋಯಿತು. ವಸಾಹತುಶಾಹಿ ಕಾಲದಲ್ಲಿ ದೇಶದಾದ್ಯಂತ ಹಕ್ಕಿಪಿಕ್ಕಿಗಳು ಮತ್ತು ಅಂತಹುದೇ ಬುಡಕಟ್ಟುಗಳನ್ನು 1871ರ ಶಾಸನದ ಮೂಲಕ ಅಂಚಿನಲ್ಲಿರುವ ‘ಅಪರಾಧ ಬುಡಕಟ್ಟುಗಳು’ ಎಂದು ಗುರುತಿಸಲಾಯಿತು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ, ಕ್ರಿಮಿನಲ್ ಬುಡಕಟ್ಟುಗಳನ್ನು ಒಟ್ಟಾರೆಯಾಗಿ ‘ಡಿನೋಟಿಫೈಡ್ ಟ್ರೈಬ್ಸ್’ ಎಂದು ಕರೆಯಲಾಗುತ್ತದೆ. ಮತ್ತು ಅವರಲ್ಲಿ ಹಕ್ಕಿಪಿಕ್ಕಿಗಳಂಥ ಹಲವರನ್ನು ಪರಿಶಿಷ್ಟ ಪಂಗಡ (ಎಸ್ಟಿ) ಎಂದು ಗೊತ್ತುಮಾಡಲಾಗಿದೆ. ಸಂಶೋಧಕರು ಹೇಳುವ ಪ್ರಕಾರ, ಹಕ್ಕಿಪಿಕ್ಕಿಗಳಿಗೆ ಅವರ ಸಂಖ್ಯೆ ಬಹಳ ಕಡಿಮೆಯಿರುವ ಕಾರಣದಿಂದ ಎಸ್ಟಿಗಳಿಗೆ ನೀಡಬೇಕಾದ ಸೌಲಭ್ಯ ನಿರಾಕರಿಸಲಾಗಿದೆ.
‘‘1970ರ ದಶಕದಲ್ಲಿ ಕಠಿಣ ಪರಿಸರ ಕಾನೂನು ಬಂದ ಬಳಿಕ ಅರಣ್ಯಗಳಿಗೆ ಪ್ರವೇಶವಿಲ್ಲದೆ, ಹಕ್ಕಿಪಿಕ್ಕಿಗಳು ಸರಕಾರ ಎಲ್ಲಿ ನೆಲೆಯೊದಗಿಸುತ್ತದೋ ಅಲ್ಲಿ ಇರಬೇಕಾದ ಅನಿವಾರ್ಯತೆಗೆ ತುತ್ತಾದರು. ಉದಾಹರಣೆಗೆ, ಗೌರಿಪುರದಲ್ಲಿ 1982ರಲ್ಲಿ ಸಮುದಾಯಕ್ಕಾಗಿ 100 ಎಕರೆ ಭೂಮಿ ಮೀಸಲಿಟ್ಟು, ಪ್ರತೀ ಮನೆಗೆ ಎರಡು ಎಕರೆ ನೀಡಲಾಯಿತು’’ ಎನ್ನುತ್ತಾರೆ ರಾಮಕೃಷ್ಣ. ಅವರು ಹಕ್ಕಿಪಿಕ್ಕಿಗಳಲ್ಲಿನ ಮತ್ತೊಂದು ಸಂಪ್ರದಾಯದ ಬಗ್ಗೆಯೂ ಹೇಳಿದರು. ಅದು ಅವರ ವಿಚಿತ್ರ ನಾಮಕರಣ ಸಂಪ್ರದಾಯ. ‘‘ಸುಮಾರು 600 ನಿವಾಸಿಗಳಿರುವ ಈ ಕಾಲನಿಯಲ್ಲಿ ಸುತ್ತಾಡಿದರೆ ಜಪಾನ್, ಅಮೆರಿಕ, ಇನ್ಸ್ಪೆಕ್ಟರ್, ಸೈಕಲ್ ರಾಣಿ, ಮೈಸೂರು ಪಾಕ್, ದಫೇದಾರ್, ಡಾಕ್ಟರ್, ಲಾಯರ್, ಹೈಕೋರ್ಟು ಮುಂತಾದ ಹೆಸರಿನವರು ಸಿಗುತ್ತಾರೆ’’ ಎಂದು ನಕ್ಕರು ರಾಮಕೃಷ್ಣ. ಅವರ ಜೊತೆಗಿದ್ದ ಮತ್ತೊಬ್ಬರ ಹೆಸರು ಹುಲಿರಾಜ ಎಂದಿತ್ತು.
ಗೌರಿಪುರದಲ್ಲಿನ ಹಕ್ಕಿಪಿಕ್ಕಿಗಳೆಲ್ಲ ದೇಶಾದ್ಯಂತ ಸಂಚರಿಸಿ ಬೇರೆ ಬೇರೆ ಭಾಷೆಯಾಡುವುದರಲ್ಲಿ ಪಳಗಿದ್ದಾರೆ. ದಿಲ್ಲಿಯ ಪ್ರಗತಿ ಮೈದಾನ ಮತ್ತು ದಿಲ್ಲಿ ಹಾತ್ಗೆ ಹೋಗಿ ಪ್ರತೀ ಚಳಿಗಾಲದಲ್ಲಿ ಮಳಿಗೆ ತೆರೆಯಲು ರಾಮಕೃಷ್ಣ ಅವರ ಪತ್ನಿ ಚಿತ್ರಮ್ಮ ಅವರಿಗೆ ಖುಷಿ. ಅಲ್ಲಿ ಸಾಮಾನ್ಯ ಗ್ರಾಹಕರು ಇವರ ಉತ್ಪನ್ನಗಳಿಗಾಗಿ ಕಾದಿರುತ್ತಾರೆ. ಬೇಟೆಯಾಡಲು ಅವಕಾಶವಿದ್ದಿದ್ದರೆ ನಾವು ಈ ಸಣ್ಣಪುಟ್ಟ ವ್ಯವಹಾರಗಳನ್ನು ಮಾಡುತ್ತಿರಲಿಲ್ಲ ಎಂಬುದು ಹುಲಿರಾಜನ ಅಳಲು.
ಈ ಉದ್ಯಮಶೀಲ ಮನೋಭಾವವೇ ಕಳೆದ ಎರಡು ಮೂರು ದಶಕಗಳಲ್ಲಿ ಅವರು ತಮ್ಮ ಉತ್ಪನ್ನಗಳನ್ನು ವಿದೇಶಕ್ಕೆ ಮುಟ್ಟಿಸುವಂತೆ ಮಾಡಿತು. ನಾವು ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಚೀನಾ ಮತ್ತು ಪಾಕಿಸ್ತಾನ ಬಿಟ್ಟು ಜಗತ್ತಿನಾದ್ಯಂತ ಎಲ್ಲಾ ದೇಶಗಳಿಗೂ ಹೋಗಿದ್ದೇವೆ ಎನ್ನುತ್ತಾರೆ ರಾಮಕೃಷ್ಣ.
ಗಿಡಮೂಲಿಕೆಗಳನ್ನು ವಿದೇಶಕ್ಕೆ ಕೊಂಡೊಯ್ಯಲು ವಿಮಾನ ನಿಲ್ದಾಣದ ಅಧಿಕಾರಿಗಳ ಅಡ್ಡಿಯೇನಿರುವುದಿಲ್ಲ. ಆದರೆ ತೈಲದಂಥ ಪದಾರ್ಥ ಒಯ್ಯುವಂತಿಲ್ಲ. ಹಾಗಾಗಿ ಅವರು ಒಣಗಿದ ಗಿಡಮೂಲಿಕೆ ಗಳನ್ನು ಮಾತ್ರ ತೆಗೆದುಕೊಂಡು ಹೋಗುತ್ತಾರೆ. ಆನಂತರ ಔಷಧ ತಯಾರಿಸಲು ಅಲ್ಲಿ ಲಭ್ಯವಿರುವ ಎಣ್ಣೆಯೊಂದಿಗೆ ಬೆರೆಸುತ್ತಾರೆ.
ರಾಮಕೃಷ್ಣ ಅವರ ಮಗ ಮತ್ತು ಸೊಸೆ ದುಬೈನಲ್ಲಿದ್ದಾರೆ. ಅಲ್ಲಿ ಅವರದೊಂದು ಗಿಡಮೂಲಿಕೆ ಉತ್ಪನ್ನ ಮಾರಾಟದ ಅಂಗಡಿಯಿದೆ. ಶಕ್ತಿ ವನಸ್ಪತಿಯಲ್ಲದೆ, ಜಠರ ಉರಿತ, ಮೂತ್ರಪಿಂಡದ ಕಲ್ಲು, ಕೆಮ್ಮು ಮತ್ತು ಶೀತ ಮತ್ತು ಕೇಶವರ್ಧಕ ಔಷಧಗಳನ್ನೆಲ್ಲ ತಯಾರಿಸುತ್ತಾರೆ ಇವರು.
ಹಣದ ವ್ಯವಹಾರದ ಬಗ್ಗೆ ಕೇಳಿದರೆ ಅದಕ್ಕೆ ರಾಮಕೃಷ್ಣ, ‘‘ಮೊತ್ತ ದೊಡ್ಡದಾಗಿದ್ದರೆ ಹಣವನ್ನು ವರ್ಗಾಯಿಸಲು ಆನ್ಲೈನ್ ವಿಧಾನ ಬಳಸುತ್ತೇವೆ. ಸಣ್ಣ ಮೊತ್ತದ ಹಣವಿದ್ದರೆ ಜೊತೆಯಲ್ಲೇ ತಂದು ಬೆಂಗಳೂರು ಅಥವಾ ದಿಲ್ಲಿಯ ಕರೆನ್ಸಿ ವಿನಿಮಯ ಕೇಂದ್ರಗಳಲ್ಲಿ ವಿನಿಮಯ ಮಾಡಿಕೊಳ್ಳುತ್ತೇವೆ. ನನ್ನ ಮಗ ದುಬೈನಿಂದ ಆನ್ಲೈನ್ನಲ್ಲಿ ನನಗೆ ಹಣ ಕಳಿಸುತ್ತಾನೆ’’ ಎನ್ನುತ್ತಾರೆ.
‘‘ನಾವು ಅನಕ್ಷರಸ್ಥರು. ಆದರೆ ನಾವು ಜಗತ್ತನ್ನು ನೋಡಿದ್ದೇವೆ’’ ಎನ್ನುತ್ತಾರೆ ಹುಲಿರಾಜ. ಹಕ್ಕಿಪಿಕ್ಕಿ ಸಮುದಾಯದ ಬಹುತೇಕ ಎಲ್ಲರ ಬಳಿಯೂ ಪಾಸ್ಪೋರ್ಟ್ ಇದೆ.
ಹಕ್ಕಿಪಿಕ್ಕಿಗಳ ಉದ್ಯಮಶೀಲತೆಯ ಸ್ಪಷ್ಟ ಚಿತ್ರ ಬೆಂಗಳೂರಿನ ಹೊರವಲಯದ ಕೆಂಗೇರಿಯಲ್ಲಿರುವ ಕಾಲನಿಯಲ್ಲಿ ಕಾಣಿಸುತ್ತದೆ. ಅಲ್ಲಿ 108 ಹಕ್ಕಿಪಿಕ್ಕಿ ಕುಟುಂಬಗಳು ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿರುವ ಕಟ್ಟಡಗಳಲ್ಲಿವೆ. 15 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಕೊಳೆಗೇರಿಗಳಲ್ಲಿದ್ದ ಕುಟುಂಬಗಳು ಅವು. ಇಲ್ಲಿ ಪುರುಷರು, ಮಹಿಳೆಯರೆಲ್ಲ ದೇಶದ ವಿವಿಧೆಡೆಗೆ ಮತ್ತು ವಿದೇಶಗಳಿಗೆ ತಲುಪಿಸಲು ತೈಲ ಮತ್ತು ಲೋಷನ್ಗಳನ್ನು ಪ್ಯಾಕ್ ಮಾಡುವುದರಲ್ಲಿ ನಿರತರು.
42 ವರ್ಷದ ರೂಪಾ ಮಯೂರ ಎಂಬವರು, ಹಕ್ಕಿಪಿಕ್ಕಿಗಳು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಬಗ್ಗೆ ವಿವರಿಸಿದರು. ‘‘ನಮ್ಮಲ್ಲಿ ಕೆಲವರು ಆರಂಭದಲ್ಲಿ ಪ್ರವಾಸಿ ವೀಸಾದಲ್ಲಿ ವಿದೇಶಕ್ಕೆ ಹೋಗುತ್ತೇವೆ. ಅಲ್ಲಿ ಬ್ಯೂಟಿ ಪಾರ್ಲರ್ಗಳಲ್ಲಿ ನಮ್ಮ ಉತ್ಪನ್ನಗಳನ್ನು ತೋರಿಸುತ್ತೇವೆ. ಅಲ್ಲಿ ನಮಗೆ ಗ್ರಾಹಕರು ಸಿಗುತ್ತಾರೆ. ನಮ್ಮ ಉತ್ಪನ್ನಗಳ ವಿಚಾರ ಬಾಯಿಮಾತಿನ ಮೂಲಕವೇ ಹರಡುತ್ತದೆ. ಹೇರ್ ಆಯಿಲ್ ಮತ್ತು ಮಸಾಜ್ ಆಯಿಲ್ಗೆ ಸಾಕಷ್ಟು ಬೇಡಿಕೆಯಿದೆ’’ ಎನ್ನುತ್ತಾರೆ ಅವರು.
ರೂಪಾ ಕೂಡ ಸುರಿನಾಮ್, ಫ್ರಾನ್ಸ್, ಇಟಲಿ, ನೆದರ್ಲ್ಯಾಂಡ್ಸ್, ಸಿಂಗಾಪುರ್, ಅಮೆರಿಕ, ಬ್ರೆಝಿಲ್, ಘಾನಾ, ಗಯಾನಾ, ಜಮೈಕಾ ಮೊದಲಾದ ದೇಶಗಳಿಗೆ ಹೋದವರು. ಅವರ ನಾಲ್ವರು ಮಕ್ಕಳಲ್ಲಿ ಇಬ್ಬರು ಚಿಕ್ಕಮಗಳೂರಿನಲ್ಲಿದ್ದಾರೆ. ಕಾಡುಗಳಿಂದ ಕಚ್ಚಾವಸ್ತು ಸಂಗ್ರಹಿಸಿ ಬೆಂಗಳೂರಿಗೆ ಕಳುಹಿಸುತ್ತಾರೆ. ಬೆಂಗಳೂರಿನಲ್ಲಿರುವ ಇನ್ನಿಬ್ಬರು ತೈಲ ತಯಾರಿಸಿ, ಮಾರ್ಕೆಟಿಂಗ್ ನಿರ್ವಹಣೆ ಮಾಡುತ್ತಾರೆ. ಆನ್ಲೈನ್ ಶಾಪಿಂಗ್ ಪೋರ್ಟಲ್ಗಳೊಂದಿಗೂ ವ್ಯವಹಾರವಿದೆ.
ಹಕ್ಕಿಪಿಕ್ಕಿಗಳ ಕಾಲನಿಯೊಂದರ ಆರ್ಡರ್ಗಳ ನಿಖರ ಸಂಖ್ಯೆ ಲೆಕ್ಕಹಾಕುವುದು ಸುಲಭವಲ್ಲ. ಆದರೆ ಮನೆಯಿಂದ ಪ್ರತಿದಿನ 50ಕ್ಕೂ ಹೆಚ್ಚು ಆರ್ಡರ್ಗಳನ್ನು ಕೊರಿಯರ್ ಮಾಡುವುದಾಗಿ ರೂಪಾ ಹೇಳುತ್ತಾರೆ. ಪ್ರತೀ ಮನೆಯವರೂ ಇದೇ ರೀತಿ ತೊಡಗಿಸಿಕೊಂಡಿದ್ದಾರೆ. ಸಾವಿರಾರು ರೂಪಾಯಿಯ ವಹಿವಾಟು. ರೂಪಾ ಮನೆಯಲ್ಲಿ ಮೂರು ಫ್ಯಾನ್ಸಿ ಮೋಟಾರು ಸೈಕಲ್ಗಳು ಇವೆ. ‘‘ನನ್ನ ಮಕ್ಕಳು ಓದಿದ್ದಾರೆ. ಹೊರಗೆ ಹೋಗಿ ಕೆಲಸ ಮಾಡಿದರೆ 10ರಿಂದ 15 ಸಾವಿರ ರೂ. ಬರಬಹುದು. ಅವರು ಈ ವ್ಯವಹಾರ ಮಾಡುವುದು ಉತ್ತಮ’’ ಎನ್ನುತ್ತಾರೆ ಅವರು.
ಹಕ್ಕಿಪಿಕ್ಕಿ ಸಮುದಾಯದವರು ಹೇಳುವಂತೆ, ವಿದೇಶಿ ಪ್ರವಾಸ ಕೆಲ ವಾರಗಳಿಂದ ಹಲವು ತಿಂಗಳುಗಳವರೆಗೆ ಇರುತ್ತದೆ. ಪ್ರತೀ ವ್ಯಕ್ತಿಗೆ ಇದರಿಂದ ಲಕ್ಷಾಂತರ ರೂ. ಆದಾಯ ಬರುತ್ತದೆ. ಸಮುದಾಯದ ಅನೇಕರು ದೂರದ ಮತ್ತು ಅಪಾಯಕಾರಿ ದೇಶಗಳಿಗೆ ಹೋಗುವುದಕ್ಕೆ ಹಣವೇ ಆಕರ್ಷಣೆ. 2018ರಲ್ಲಿ ಅವರ ವೀಸಾಗಳು ಸರಿಯಾಗಿಲ್ಲ ಎಂಬ ಕಾರಣಕ್ಕೆ ಮೊಝಾಂಬಿಕ್ನಲ್ಲಿ ಇಡೀ ಗುಂಪನ್ನು ಬಂಧಿಸಲಾಗಿತ್ತು. ಅವರು ದೇಶಕ್ಕೆ ಮರಳಲು ಆಗ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಮಧ್ಯಸ್ಥಿಕೆ ವಹಿಸಬೇಕಾಗಿ ಬಂದಿತ್ತು.
ಹಕ್ಕಿಪಿಕ್ಕಿಗಳ ಮೇಲೆ ಸಿನೆಮಾ ಮಾಡಿರುವ ಮಧು ಭೂಷಣ್ ಪ್ರಕಾರ, ‘‘ಮೂಲತಃ ಹಕ್ಕಿಪಿಕ್ಕಿಗಳು ಉದ್ಯಮಶೀಲರು. ಆದರೆ ಅವರ ಸಂಪಾದನೆ ಅವರಿಗೆ ಭದ್ರತೆಯಾಗಿ ಒದಗುವುದಿಲ್ಲ. ಗಳಿಕೆ, ಖರ್ಚು, ಮೋಜು ಇಷ್ಟರಲ್ಲೇ ಮುಗಿದುಹೋಗುತ್ತದೆ. ಮತ್ತೆ ಹೊಸದಾಗಿ ಶುರುಮಾಡುತ್ತಾರೆ. ಅವರು ಒಂದು ಕಾಲದಲ್ಲಿ ಅಲೆಮಾರಿಗಳಾಗಿದ್ದರು. ಈಗ ಜಾಗತಿಕ ಅಲೆಮಾರಿಗಳಾಗಿದ್ದಾರೆ.’’
(ಕೃಪೆ: frontline.thehindu.com)







