ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದೂರು ನೀಡಿದ ಕಾಂಗ್ರೆಸ್
ಕರ್ನಾಟಕದಲ್ಲಿ ಗಲಭೆಗಳು ನಡೆಯಲಿವೆ ಎಂಬ ಹೇಳಿಕೆ ವಿಚಾರ

ಬೆಂಗಳೂರು, ಎ.27: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂಸಾಚಾರ ಆಗುತ್ತದೆ ಎಂದು ರಾಜ್ಯದ ಮತದಾರರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ನಾಯಕರು ಇಲ್ಲಿನ ಹೈಗ್ರೌಂಡ್ಸ್ ಠಾಣಾ ಪೊಲೀಸರು ದೂರು ಸಲ್ಲಿಕೆ ಮಾಡಿದ್ದಾರೆ.
ಮತದಾರರಿಗೆ ಬೆದರಿಕೆ ಆರೋಪದ ಮೇಲೆ ಕೇಂದ್ರ ಸಚಿವ ಅಮಿತ್ ಶಾ ಅವರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಗುರುವಾರ ನಗರದ ಕೇಂದ್ರ ವಿಭಾಗದ ಪೊಲೀಸರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ವಕ್ತಾರ ಗೌರವ್‍ವಲ್ಲಭ್ ದೂರು ಸಲ್ಲಿಸಿದರು.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲ ಮಾತನಾಡಿ, ಜಾತಿ ಧರ್ಮಗಳ ಹೆಸರಿನಲ್ಲಿ ದ್ವೇಷ ಹರಡಿ ಕರ್ನಾಟಕ ರಾಜ್ಯದ ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಆಧಾರರಹಿತ ಆರೋಪ ಮಾಡಲಾಗಿದೆ. ಎ.26ರಂದು ಕೇಂದ್ರ ಸಚಿವ ಅಮಿತ್ ಶಾ ಅವರು ಬಿಜೆಪಿ ಪ್ರಚಾರ ಸಮಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೋಮು ಗಲಭೆಗಳು ಹೆಚ್ಚಲಿವೆ ಎಂಬ ಸುಳ್ಳು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪಿಎಫ್‍ಐ ಮೇಲಿನ ನಿಷೇಧ ಹಿಂಪಡೆಯಲಿದೆ ಎಂಬ ಆಧಾರರಹಿತ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಳು ದ್ವೇಷ ಹರಡಿ ಕೋಮು ಸೌಹಾರ್ದತೆಗೆ ಧಕ್ಕೆ ತಂದು ಚುನಾವಣೆಯಲ್ಲಿ ಅಕ್ರಮಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಅಮಿತ್ ಶಾ ಅವರ ಸುಳ್ಳು ಆರೋಪಗಳು ಉದ್ದೇಶಪೂರ್ವಕವಾಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಅನೇಕ ತಿಂಗಳುಗಳ ಕಾಲ ಪಿಎಫ್‍ಐ ನಿಷೇಧಕ್ಕೆ ಆಗ್ರಹ ಮಾಡಿದರೂ ಬಸವರಾಜ ಬೊಮ್ಮಾಯಿ ಸರಕಾರ ಮಾಡಿರಲಿಲ್ಲ. ಕಾಂಗ್ರೆಸ್ ಸರಕಾರ ದಶಕಗಳ ಕಾಲ ರಾಜ್ಯವನ್ನು ಆಳಿದೆ. 2013ರಿಂದ 2018ರ ಸರಕಾರದಲ್ಲಿ ಕಾಂಗ್ರೆಸ್ ಸರ್ಕಾರ ಕೋಮುಗಲಭೆಗೆ ಆಸ್ಪದ ನೀಡಿರಲಿಲ್ಲ ಎಂದ ಅವರು, ಕೇಂದ್ರ ಗೃಹ ಸಚಿವರು ಇಂತಹ ಷಡ್ಯಂತ್ರಗಳನ್ನು ಬೇರೆ ರಾಜ್ಯಗಳಲ್ಲಿ ಪ್ರಯೋಗಿಸಬಹುದು. ಆದರೆ ಕರ್ನಾಟಕದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಕಾನೂನಿನ ಅರಿವಿದೆ. ಅಮಿತ್ ಶಾ ಹಾಗೂ ಬಿಜೆಪಿಯ ನಾಯಕರ ಸುಳ್ಳು ಹಾಗೂ ಆಧಾರರಹಿತ ಆರೋಪ ಹಾಗೂ ದ್ವೇಷ ಭಾಷಣದ ವಿರುದ್ಧ ಎಫ್‍ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ನಮ್ಮ ರಾಜ್ಯ ಶಾಂತಿಯ ತೋಟ. ಕಾಂಗ್ರೆಸ್ ಬಂದರೆ ಕೋಮು ಗಲಭೆ ನಡೆಯಲಿದೆ ಎನ್ನುವ ಹೇಳಿಕೆ ಕೊಟ್ಟಿದ್ದಾರೆ. ಇದರ ಅರ್ಥ ಏನು, ಕಾಂಗ್ರೆಸ್‍ಗೆಮತ ಕೊಡಬೇಡಿ ಎಂದು ಮತದಾರನ್ನುಹೆದರಿಸುತ್ತಿದ್ದಾರೆ. ಅಲ್ಲದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಭಾಷಣಗಳಿಗೆ ಅವಕಾಶವಿಲ್ಲ. ಇದು ದೊಡ್ಡ ಪ್ರಕರಣವಾಗಿದ್ದು, ಇದಕ್ಕೆ ಸಂಬಂಧಿಸಿದ ಸಾಕ್ಷಿಗಳು ಮಾಧ್ಯಮಗಳಲ್ಲಿದ್ದು, ಈ ನೆಲದ ಕಾನೂನಿನಂತೆ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಸಚಿವ ಸೋಮಣ್ಣ ವಿರುದ್ಧವೂ ದೂರು:
ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಅವರಿಗೆ 50 ಲಕ್ಷ ರೂ. ಹಣದ ಆಮಿಷವೊಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ, ವಸತಿ ಸಚಿವ ವಿ. ಸೋಮಣ್ಣ ವಿರುದ್ಧವೂ ಕಾಂಗ್ರೆಸ್ ನಾಯಕರು ದೂರು ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿಗೆ 50 ಲಕ್ಷ ರೂ.ಆಮಿಷ: ಬಿಜೆಪಿ ಅಭ್ಯರ್ಥಿ ಸೋಮಣ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು


