ಕಾಂಗ್ರೆಸ್ ಪಕ್ಷದ ವಾರಂಟಿಯೇ ಮುಗಿದು ಹೋಗಿದೆ: ಪ್ರಧಾನಿ ಮೋದಿ ವ್ಯಂಗ್ಯ
'ದೇಶ ಮುನ್ನಡೆಸಲು ಉಚಿತ ಸಂಸ್ಕೃತಿಯಿಂದ ದೂರ ಆಗುವುದು ಅನಿವಾರ್ಯ'

ಬೆಂಗಳೂರು: 'ಕೆಲವು ಪಕ್ಷಗಳು ರಾಜಕೀಯವನ್ನು ಭ್ರಷ್ಟಾಚಾರಕ್ಕೆ ಬಳಸಿಕೊಂಡಿದ್ದವು. ಅವರಿಗೆ ಯುವಜನರ ಚಿಂತೆ ಇಲ್ಲ. ಸರಕಾರವು ವರ್ತಮಾನದ ಜೊತೆ ಭವಿಷ್ಯದ ಕುರಿತು ಚಿಂತಿಸಬೇಕು. ಸಂಪತ್ತಿನ ವೃದ್ಧಿ, ಜನಕಲ್ಯಾಣದ ಕುರಿತು ಯೋಚಿಸಬೇಕು. ಬಿಜೆಪಿ ಶಾರ್ಟ್ ಕಟ್ ಬದಲಾಗಿ ವಿಕಸಿತ ದೇಶಕ್ಕಾಗಿ ಕೆಲಸ ಮಾಡುತ್ತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
‘ಲೈವ್ ವರ್ಚುವಲ್ ರ‍್ಯಾಲಿ’ಯಲ್ಲಿ ಮಾತನಾಡಿದ ಅವರು, 'ನಾವು ಕೋವಿಡ್ ವ್ಯಾಕ್ಸಿನ್ ಉಚಿತವಾಗಿ ಕೊಟ್ಟಿದ್ದೇವೆ. ಜನರು ಹಸಿವಿನಿಂದ ಬಳಲಬಾರದೆಂದು ಉಚಿತ ಪಡಿತರ ಕೊಡಲಾಯಿತು. ಆದರೆ, ದೇಶ ಮುನ್ನಡೆಸಲು ಉಚಿತ ಸಂಸ್ಕೃತಿಯಿಂದ ದೂರ ಆಗುವುದು ಅನಿವಾರ್ಯ. ಮೂಲಸೌಕರ್ಯಗಳ ಹೆಚ್ಚಳ, ಐಐಟಿ, ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಳಕ್ಕೆ ಆದ್ಯತೆ ಕೊಡಲಾಗಿದೆ. ಹಿಂದಿನ ಆಡಳಿತಗಾರರು ದೂರದೃಷ್ಟಿ ಹೊಂದಿರಲಿಲ್ಲ. ಉಚಿತ ಕುರಿತ ಆಶ್ವಾಸನೆ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುವವರನ್ನು ದೂರವಿಡಿ' ಎಂದು ವಿನಂತಿಸಿದರು.
'ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಸುಳ್ಳು ಆಶ್ವಾಸನೆ ನೀಡಿ ಅನುಷ್ಠಾನಕ್ಕೆ ತಾರದೆ ಇದ್ದುದನ್ನು ಜನರಿಗೆ ತಿಳಿಸಬೇಕು. ಹಿಮಾಚಲ ಪ್ರದೇಶ, ರಾಜಸ್ಥಾನಗಳಲ್ಲಿ ಭ್ರಷ್ಟಾಚಾರ, ಕುಟುಂಬ ರಾಜಕೀಯದ ಗ್ಯಾರಂಟಿಯನ್ನಷ್ಟೇ ನೀಡಬಲ್ಲದು. ಕಾಂಗ್ರೆಸ್ ವಾರಂಟಿ ಈಗಾಗಲೇ ಎಕ್ಸ್ ಪೈರ್ ಆಗಿದೆ' ಎಂದು ವ್ಯಂಗ್ಯವಾಗಿ ತಿಳಿಸಿದರು.
'800 ವರ್ಷಗಳ ಗುಲಾಮಿತನದ ಬಳಿಕ 1947ರಲ್ಲಿ ಸ್ವಾತಂತ್ರ್ಯ ಲಭಿಸಿತು. 25 ವರ್ಷಗಳ ಪ್ರಮುಖ ಆಂದೋಲನ ಅದರ ಹಿಂದಿತ್ತು. ಇದೀಗ 75 ವರ್ಷಗಳ ಬಳಿಕ ಅಮೃತ ಕಾಲಕ್ಕಾಗಿ ಪ್ರಯತ್ನ ಆರಂಭವಾಗಿದೆ. ಕರ್ನಾಟಕದ ವಿಕಾಸದ ಮೂಲಕ ಭಾರತದ ಅಭಿವೃದ್ಧಿ ಆಗಲಿದೆ. ಶಿವಮೊಗ್ಗ ಮತ್ತಿತರ ಕಡೆ ವಿಮಾನನಿಲ್ದಾಣ ಆರಂಭವಾಗಿದೆ. ಇದು ಇನ್ನಷ್ಟು ವೇಗ ಪಡೆಯಲು ಬಹುಮತದ ಬಿಜೆಪಿ ಸರಕಾರ ಬೇಕಿದೆ' ಎಂದು ತಿಳಿಸಿದರು.
'ಜನರ ಮನೆಮನೆಗೆ ತೆರಳಿ ಸರಕಾರದ ಸಾಧನೆಗಳನ್ನು ಮುಂದಿಡಬೇಕು; ಇದು ಬಿಜೆಪಿ ಗೆಲುವಿಗೆ ಪೂರಕವಾಗಿ ಕೆಲಸ ಮಾಡಲಿದೆ' ಎಂದು ತಿಳಿಸಿದರು.
ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಚುನಾವಣೆ ಸಮರ ಆರಂಭವಾಗಿದೆ. ಬಿಜೆಪಿ ಗೆಲುವು ಖಚಿತವಾಗಿದೆ. ಮಹಾಪ್ರಚಾರ ಅಭಿಯಾನದ ಮನೆಮನೆ ಭೇಟಿಯ ಮಧ್ಯೆ ಕಾರ್ಯಕರ್ತರಿಗೆ ಪ್ರೇರಣೆ ನೀಡಿ ಶಕ್ತಿವಂತರಾಗಿ ಉತ್ಸಾಹದಿಂದ ದುಡಿಯಲು ಶ್ರೇಷ್ಠ ಜನನಾಯಕ ಮೋದಿ ಅವರು ಸಂವಾದದಲ್ಲಿ ಭಾಗವಹಿಸುತ್ತಿದ್ದಾರೆ.
15 ಬಾರಿ ಪ್ರವಾಸ ಮಾಡಿದ ಪ್ರಧಾನಿಯವರು ರಾಜಕೀಯ ಚಿತ್ರಣ ಬದಲಾಯಿಸಿದ್ದಾರೆ. ಕಾರ್ಯಕರ್ತರಲ್ಲಿ ಬಹುಮತದ ಸರಕಾರದ ವಿಶ್ವಾಸ ಲಭಿಸಿದೆ ಎಂದು ತಿಳಿಸಿದರು.
ಶಿವಮೊಗ್ಗದ ವಿರೂಪಾಕ್ಷಪ್ಪ, ಚಿತ್ರದುರ್ಗದ ಫಕೀರಪ್ಪ, ಚಂದ್ರಶೇಖರ್ ವಿಜಯನಗರ, ದಕ್ಷಿಣ ಕನ್ನಡದ ಅರುಣ್ ಸೇಠ್, ಬೆಂಗಳೂರಿನ ಬಿ.ಆರ್.ಯೋಗೀಶ್ ಅವರ ಪ್ರಶ್ನೆಗಳಿಗೆ ಪ್ರಧಾನಿಯವರು ಉತ್ತರ ನೀಡಿದರು.







