ಬಂಗಾಳದಲ್ಲಿ ರಾಮನವಮಿ ಹಿಂಸಾಚಾರ: ಎನ್ಐಎ ತನಿಖೆಗೆ ಆದೇಶಿಸಿದ ಕಲ್ಕತ್ತಾ ಹೈಕೋರ್ಟ್

ಕೋಲ್ಕತಾ: ಕಳೆದ ತಿಂಗಳು ಪಶ್ಚಿಮ ಬಂಗಾಳದ ಹೂಗ್ಲಿ, ಹೌರಾ ಹಾಗೂ ದಕ್ಷಿಣ ದಿನಾಜ್‌ಪುರ ಜಿಲ್ಲೆಗಳಲ್ಲಿ ರಾಮನವಮಿ ಆಚರಣೆಯ ವೇಳೆ ಭುಗಿಲೆದ್ದ ಹಿಂಸಾಚಾರದ ಕುರಿತು ತನಿಖೆ ನಡೆಸುವಂತೆ ಕಲ್ಕತ್ತಾ ಹೈಕೋರ್ಟ್ ಗುರುವಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಆದೇಶಿಸಿದೆ.
ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕಲ್ಕತ್ತಾ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ನೇತೃತ್ವದ ವಿಭಾಗೀಯ ಪೀಠವು ಈ ಪ್ರಕರಣಗಳಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರ ದಾಖಲೆಗಳನ್ನು ಎರಡು ವಾರಗಳಲ್ಲಿ ಕೇಂದ್ರಕ್ಕೆ ಹಸ್ತಾಂತರಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತು.
ಆ ದಾಖಲೆಗಳನ್ನು ಸ್ವೀಕರಿಸಿದ ನಂತರ ಆ ದಾಖಲೆಗಳನ್ನು ಎನ್‌ಐಎಗೆ ಹಸ್ತಾಂತರಿಸುವಂತೆ ನ್ಯಾಯಾಲಯವು ಕೇಂದ್ರಕ್ಕೆ ಸೂಚಿಸಿದೆ.
ಬಿಜೆಪಿ ನಾಯಕ ಸುವೇಂಧು ಅಧಿಕಾರಿ ಹಿಂಸಾಚಾರದ ಬಗ್ಗೆ ಎನ್‌ಐಎ ತನಿಖೆಯನ್ನು ಕೋರಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ. ಹೂಗ್ಲಿ ಜಿಲ್ಲೆಯ ರಿಶ್ರಾ, ಹೌರಾದ ಶಿಬ್‌ಪುರ ಹಾಗೂ ದಕ್ಷಿಣ ದಿನಾಜ್‌ಪುರ ಜಿಲ್ಲೆಯ ದಲ್ಖೋಲಾದಲ್ಲಿ ಘರ್ಷಣೆಗಳು ಸಂಭವಿಸಿದ್ದವು.
ಹೌರಾದ ಶಿಬ್‌ಪುರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಗಳು ಭುಗಿಲೆದ್ದಿದ್ದರಿಂದ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಕಲ್ಲು ತೂರಾಟ ನಡೆಸಲಾಯಿತು ಹಾಗೂ ಅಂಗಡಿಗಳನ್ನು ಧ್ವಂಸಗೊಳಿಸಲಾಯಿತು. ನಂತರ ರಾಜ್ಯದ ಹೂಗ್ಲಿ ಮತ್ತು ದಾಲ್ಖೋಲಾ ಜಿಲ್ಲೆಗಳಲ್ಲಿಯೂ ಘರ್ಷಣೆಗಳು ವರದಿಯಾಗಿವೆ.
ಹೌರಾದಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಘರ್ಷಣೆಯ ಬಗ್ಗೆ ಕ್ರಮ ತೆಗೆದುಕೊಂಡ ವರದಿಯನ್ನು ಎಪ್ರಿಲ್ 5 ರೊಳಗೆ ನೀಡಬೇಕೆಂದು ಪಶ್ಚಿಮ ಬಂಗಾಳ ಸರಕಾರಕ್ಕೆ ಕಲ್ಕತ್ತಾ ಹೈಕೋರ್ಟ್ ಈ ತಿಂಗಳ ಆರಂಭದಲ್ಲಿಆದೇಶಿಸಿತ್ತು.







