ನನ್ನನ್ನು ಸೋಲಿಸಲು ರಾಮನಗರ ಕ್ಷೇತ್ರದಲ್ಲಿ ಬಿಜೆಪಿ- ಕಾಂಗ್ರೆಸ್ ಮೈತ್ರಿ: ನಿಖಿಲ್ ಕುಮಾರಸ್ವಾಮಿ ಆರೋಪ

ರಾಮನಗರ : 'ನನ್ನನ್ನು ಸೋಲಿಸಲು ರಾಮನಗರ ಕ್ಷೇತ್ರದಲ್ಲಿ ಬಿಜೆಪಿ- ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ' ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ, ರಾಮನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಾಮನಗರ ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ಇದೇ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ''ನನ್ನನ್ನ ರಾಜಕೀಯವಾಗಿ ಮುಗಿಸಬೇಕು ಎಂದು ಬಿಜೆಪಿ-ಕಾಂಗ್ರೆಸ್ ಒಂದಾಗಿದೆ. ಕ್ಷೇತ್ರದ ಹಲವೆಡೆ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿಗೆ ಮತ ಹಾಕಿ ಅಂದಿದ್ದಾರೆ. ನನಗೆ ಮತ ಹಾಕಲಿಲ್ಲ ಅಂದರೂ ಪರವಾಗಿಲ್ಲ ಬಿಜೆಪಿಗೆ ಮತಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ಹೇಳುತ್ತಿದ್ದಾರೆ'' ಎಂದು ಆರೋಪಿಸಿದರು.
''ಇನ್ನೂ ಕೆಲವು ಕಡೆ ಬಿಜೆಪಿಯವರೂ ಕೂಡಾ ಕಾಂಗ್ರೆಸ್ಗೆ ಮತಹಾಕಿ ಅಂತ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಮತಗಳನ್ನ ವಿಭಜನೆ ಮಾಡಲು ಕಾಂಗ್ರೆಸ್-ಬಿಜೆಪಿ ಈ ರೀತಿ ಮಾಡುತ್ತಿದೆ'' ಎಂದು ನಿಖಿಲ್ ಕುಮಾರಸ್ವಾಮಿ ದೂರಿದರು.





