ಬೆಂಗಳೂರು | ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಆರೋಪಿ ಸೆರೆ

ಬೆಂಗಳೂರು, ಎ.27: ಅನೈತಿಕ ಸಂಬಂಧ ಬೇಡ ಎಂದಿದ್ದ ಪ್ರಿಯಕರನ ನಿರ್ಧಾರಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಲು ಮುಂದಾಗಿದ್ದ ಮಹಿಳೆಯನ್ನು ಪ್ರಿಯಕರನೇ ಹತ್ಯೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸರಗುಣಂ (35) ಮೃತ ಮಹಿಳೆಯಾಗಿದ್ದು, ಕೃತ್ಯವೆಸಗಿದ ಆರೋಪದಡಿ ಗಣೇಶ್(22) ಎಂಬಾತನನ್ನು ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೃತ ಸರಗುಣಂ ಈಗಾಗಲೇ ಮದುವೆಯಾಗಿದ್ದು 17 ವರ್ಷದ ಮಗನಿದ್ದಾನೆ. ಪತಿ ಕೂಲಿ ಕೆಲಸ ಮಾಡಿಕೊಂಡಿದ್ದು, ಈಕೆ ಮನೆಕೆಲಸ ಮಾಡಿಕೊಂಡಿದ್ದಳು. ಕಳೆದ ನಾಲ್ಕು ವರ್ಷದ ಹಿಂದೆ ಬಸವೇಶ್ವರ ನಗರ ಬಳಿಯ ಎಂಜಿ ನಗರದಲ್ಲಿ ವಾಸವಿದ್ದಾಗ ಸರಗುಣಂಗೆ ಆಟೊ ಚಾಲಕನಾಗಿದ್ದ ಗಣೇಶ್ ಎಂಬಾತನ ಪರಿಚಯವಾಗಿತ್ತು. ಆನಂತರ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸರಗುಣಂ ತನ್ನ ಗಂಡನಿಗೆ ಗೊತ್ತಾಗದಂತೆ ಗಣೇಶನನ್ನು ಭೇಟಿ ಮಾಡುತ್ತಿದ್ದಳು. ಅಲ್ಲದೆ ಸರಗುಣಂ ಗಣೇಶನಿಗೆ 50 ಸಾವಿರ ರೂ. ಹಣ ನೀಡಿದ್ದಳು. ಜೊತೆಗೆ ಬಸವೇಶ್ವರ ನಗರದ ಜೆಸಿ ನಗರದಲ್ಲಿ ಒಂದು ಬಾಡಿಗೆ ಮನೆಯನ್ನೂ ಆತನಿಗೆ ವ್ಯವಸ್ಥೆ ಮಾಡಿದ್ದಳು. ಸರಗುಣಂ ಆಗಾಗ ಇಲ್ಲಿಗೆ ಬಂತು ಗಣೇಶನ ಜೊತೆ ಕಾಲ ಕಳೆಯುತ್ತಿದ್ದಳು. ಇತ್ತೀಚೆಗೆ ಗಣೇಶ್‍ಗೆ ಮತ್ತೋರ್ವಳ ಪರಿಚಯವಾಗಿದ್ದು, ಆಕೆಯ ಜೊತೆ ಸಂಬಂಧ ಹೊಂದಿದ್ದ. ಹೀಗಾಗಿ ಗಣೇಶ್ ಸರಗುಣಂಯಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದ ಎನ್ನಲಾಗಿದೆ.
ಎರಡು ದಿನಗಳ ಹಿಂದೆ ಸರಗುಣಂ ಮತ್ತೆ ಗಣೇಶನ ಮನೆಗೆ ಬಂದಿದ್ದು, ನನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದು, ಹಣ ವಾಪಸ್ ಕೊಡು. ಇಲ್ಲವಾದರೆ ಗಂಡನನ್ನು ಬಿಟ್ಟು ಬರುತ್ತೇನೆ ಮದುವೆಯಾಗು ಎಂದು ಪೀಡಿಸಿದಾಗ ಹಗ್ಗದಿಂದ ಆಕೆಯನ್ನು ನೇಣು ಬಿಗಿದು ಕೊಲೆಗೈದಿದ್ದಾನೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.