ಗೋಪಾಲ ಪೂಜಾರಿಯನ್ನು ಭಯೋತ್ಪಾದಕ ಎಂದು ಹೇಳಿಲ್ಲ: ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ

ಬೈಂದೂರು, ಎ.27: ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ವ್ಯಕ್ತಿತ್ವದ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಅವರನ್ನು ಭಯೋತ್ಪಾದಕ ಎಂದು ಹೇಳಿಲ್ಲ. ಅವರು ಪ್ರತಿನಿಧಿಸುವ ಕಾಂಗ್ರೆಸ್ ಭಯೋತ್ಪಾದಕರಿಗೆ ಬೆಂಬಲ ಕೊಡುವ ಪಕ್ಷವಾಗಿದೆ. ಅವರು ನನ್ನ ವಿರುದ್ಧ ಯಾಕೆ ಮುಗಿಬಿದ್ದಿದ್ದಾರೆ ಎಂಬುದು ತಿಳಿದಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬೈಂದೂರಿನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಸರಿಯನ್ನು ಅಲರ್ಜಿ ಎಂದು ತಿಳಿದು ಕೊಂಡು ಕೇಸರಿ ಶಾಲು ವಿರೋಧಿಸುತ್ತಿದ್ದ, ಹಾಸ್ಯ ಮಾಡುತ್ತಿದ್ದ ಕಾಂಗ್ರೆಸ್‌ನವರು ಈಗ ಕೇಸರಿ ಶಾಲು ಹಾಕಿ ಕೊಂಡು ಮನೆಮನೆಗೆ ತೆರಳಿ ಪ್ರಚಾರ ಮಾಡುತಿದ್ದಾರೆ. ಇದು ಬಿಜೆಪಿಯ ಪ್ರಥಮ ಸುತ್ತಿನಲ್ಲಿ ಗೆಲುವು ಎಂದರು.
ಹಿಂದುತ್ವ ಬಿಜೆಪಿ ಆಸ್ತಿಯಲ್ಲ ಎಂಬುದನ್ನು ಸಾರ್ವತ್ರಿಕವಾಗಿ ಡಿಕೆಶಿ ಹೇಳಿದ್ದನ್ನು ನಾವು ಅಲ್ಲಗಳೆಯುವುದಿಲ್ಲ. ಆದರೆ ಹಿಂದೂಗಳು ಪೂಜಿಸುವ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ವಂಚನೆಯ ಮತಾಂತರ ಕಾಯ್ದೆಯನ್ನು ಸ್ವಾಗತಿಸುತ್ತೇವೆ ಎಂದು ಡಿಕೆಶಿ, ಸಿದ್ದರಾಮಯ್ಯ ಹೇಳಿದರೆ ಕಾಂಗ್ರೆಸ್‌ನವರ ಹಿಂದುತ್ವದ ಪ್ರೀತಿ, ಅಭಿಮಾನದ ಪ್ರತಿಪಾದನೆಗೆ ಅರ್ಥ ಬರುತ್ತದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಲಿದೆ. 140-150 ಸೀಟು ಗೆಲ್ಲುವ ಆಶಯವಿದೆ. ಕರಾವಳಿ ಮೂರು ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರ ಗೆಲ್ಲುವ ಉತ್ಸಾಹ ಕಾರ್ಯಕರ್ತರಲ್ಲಿದೆ. ಈಗಾಗಾಲೇ 224 ವಿಧಾನ ಸಭಾ ಕ್ಷೇತ್ರದಲ್ಲಿ ರಾಜ್ಯ ಮತ್ತು ಕೇಂದ್ರದ ನಾಯಕರು, ಸ್ಟಾರ್ ಪ್ರಚಾರಕರು ಪ್ರಚಾರದ ಕೆಲಸ ಮಾಡುತ್ತಿದ್ದು ಪಕ್ಷದ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಡಾ. ಜ್ಯೋತಿ ಪಾಂಡ್ಯ, ಮುಖಂಡರಾದ ಶ್ಯಾಮಲಾ ಎಸ್.ಕುಂದರ್, ಮಹೇಂದ್ರ ಪೂಜಾರಿ, ಸುರೇಶ ಬಟ್ವಾಡಿ, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಪ್ರಜ್ವಲ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ, ಮಾಧ್ಯಮ ಸಂಚಾಲಕ ಗಣೇಶ ಗಾಣಿಗ ಉಪ್ಪುಂದ ಉಪಸ್ಥಿತರಿದ್ದರು.
‘ಬಿಜೆಪಿ ಸರಕಾರದಲ್ಲಿ ಮೀನುಗಾರರಿಗೆ ಅತೀ ಹೆಚ್ಚು ಅನುಕೂಲವಾದ ಯೋಜನೆಗಳು ದೊರೆತಿವೆೆ. ಈಗಾಗಲೇ ಬಾಕಿ ಉಳಿದಿರುವ ನಾಡದೋಣಿ ಮೀನುಗಾರರ ಸೀಮೆಎಣ್ಣೆ ಕೂಡ ಹಂತ ಹಂತವಾಗಿ ಬಿಡುಗಡೆಯಾಗಿದೆ. ಮರವಂತೆ ಮೀನುಗಾರರು ಮತದಾನ ಬಹಿಷ್ಕರಿಸುವ ವಿಷಯ ಅವರ ಹಕ್ಕಿನ ಆಗ್ರಹಕ್ಕಾಗಿ ಸರಿಯಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಜೊತೆ ಮರವಂತೆಗೆ ಶೀಘ್ರದಲ್ಲಿ ಭೇಟಿ ನೀಡುತ್ತೇನೆ’
-ಕೋಟ ಶ್ರೀನಿವಾಸ ಪೂಜಾರಿ, ಸಚಿವರು







